ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕರ್ಮಭೂಮಿ ಗುರುಮಠಕಲ್ ಪಟ್ಟಣದಲ್ಲಿ, ಅಕ್ಟೋಬರ್ 31ರಂದು RSS ಪಥಸಂಚಲನಕ್ಕೆ ಅನುಮತಿ ಸಿಕ್ಕಿದೆ. ಯಾದಗಿರಿ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದೆ. ರಾಜ್ಯಸಭಾ ಸದಸ್ಯರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ, ಈ ಹಿಂದೆ 8 ಬಾರಿ ಗುರುಮಠಕಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಪಥಸಂಚಲನಕ್ಕೆ, ಮಾರ್ಗ ಮತ್ತು ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಂತರ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಸರ್ಕಾರಿ ಆದೇಶದ ಮೂಲಕ ಅನುಮತಿ ನೀಡಿದ್ದಾರೆ.
ಆರ್‌ಎಸ್‌ಎಸ್‌ನ ಜಿಲ್ಲಾ ಪ್ರಚಾರ್ ಪ್ರಮುಖ್ ಬಸ್ಸಪ್ಪ ಸಂಜನೋಳ್ ಅವರು ಅಕ್ಟೋಬರ್ 23ರಂದು ಸಲ್ಲಿಸಿದ ಅರ್ಜಿಯನ್ನು ಅನುಸರಿಸಿ ಈ ಆದೇಶ ಹೊರಡಿಸಲಾಗಿದೆ.
RSS ಪಥಸಂಚಲನ ಮೆರವಣಿಗೆಯು ಸಾಮ್ರಾಟ್ ವೃತ್ತ, ಎಪಿಎಂಸಿ ವೃತ್ತ, ಹನುಮಾನ್ ದೇವಸ್ಥಾನ, ಮರಾಠವಾಡಿ, ಪೊಲೀಸ್ ಠಾಣೆ ರಸ್ತೆ, ಮಿಲನ್ ಚೌಕ್ ಮತ್ತು ಸಿಹಿ ನೀರು ಬಾವಿ ಮಾರುಕಟ್ಟೆ ಮುಖ್ಯ ರಸ್ತೆಯ ಮೂಲಕ ರಾಮ್ ನಗರದಲ್ಲಿ ಕೊನೆಗೊಳ್ಳಲು ಪೊಲೀಸರು ಅವಕಾಶ ನೀಡಿದ್ದಾರೆ.
ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು ಮತ್ತು ಯಾವುದೇ ನಷ್ಟವಾದ್ರೆ ಸಂಪೂರ್ಣ ವೆಚ್ಚವನ್ನು ಸಂಘಟಕರೇ ಭರಿಸಬೇಕೆಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

