ಕಾಂಗ್ರೆಸ್‌ಗೆ 15 ಕ್ಷೇತ್ರಗಳಲ್ಲಿ ಗೆಲುವು : ಕೇವಲ 2 ಕ್ಷೇತ್ರಗಳಲ್ಲಿ ಬಿಜೆಪಿ ಜಯ

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಬಿಡಿಸಿಸಿ ಬ್ಯಾಂಕ್) ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭಾರಿ ಗೆಲುವು ಸಾಧಿಸಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು. ಚಾಮರಾಜಪೇಟೆಯ ಬಿಡಿಸಿಸಿ ಬ್ಯಾಂಕ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಒಟ್ಟು 18 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ 2, ಚನ್ನಪಟ್ಟಣದ 1, ಕನಕಪುರದ 2 ಮತ್ತು ಮಾಗಡಿಯ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ. ಶಾಸಕ ಸೋಮಶೇಖರ್ ಸಹಕಾರದಿಂದ ಅವರ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಹೊಸಕೋಟೆ 2, ದೇವನಹಳ್ಳಿ 1, ದೊಡ್ಡಬಳ್ಳಾಪುರ 1, ಆನೇಕಲ್ 1 ಹಾಗೂ ಬೆಂಗಳೂರು ಉತ್ತರ 1 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜೊತೆಗೆ, ಎಚ್.ಎಂ. ರೇವಣ್ಣ ಅವರ ಸಹಕಾರದಿಂದ ಮತ್ತೊಂದು ಕ್ಷೇತ್ರದಲ್ಲಿ ಜಯ ಗಳಿಸಲಾಗಿದೆ. ನೆಲಮಂಗಲ ಮತ್ತು ಸೋಲೂರುಗಳಲ್ಲಿ ಮಾತ್ರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ.

ಈ ಗೆಲುವಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ, ಕೃಷ್ಣ ಬೈರೇಗೌಡ ಮತ್ತು ಹಲವು ಶಾಸಕರ ಸಹಕಾರ ಕಾರಣವಾಗಿದೆ ಎಂದು ಸುರೇಶ್ ಹೇಳಿದರು. ಬೆಂಗಳೂರು ಉತ್ತರ, ದಕ್ಷಿಣ ಮತ್ತು ನಗರ ಜಿಲ್ಲೆಗಳ 36 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬಿಡಿಸಿಸಿ ಬ್ಯಾಂಕ್‌ನ್ನು ಅತ್ಯುತ್ತಮವಾಗಿ ಮುನ್ನಡೆಸಿ, ರೈತರು ಹಾಗೂ ನಾಗರಿಕರಿಗೆ ಉತ್ತಮ ಸೇವೆ ಮತ್ತು ಸೌಲಭ್ಯ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author