ಜೀ ಪವರ್ ವಾಹಿನಿಯ ಹೊಸ ರಿಯಾಲಿಟಿ ಶೋ ‘ಹಳ್ಳಿ ಪವರ್’ ಈಗಾಗಲೇ ಪ್ರೇಕ್ಷಕರ ಮನ ಸೆಳೆದಿದೆ. ಸ್ಪರ್ಧಿಗಳು ಮೊದಲೇ ದಿನದಿಂದ ಹಳ್ಳಿ ಜೀವನದ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ನಗರ ಜೀವನಕ್ಕೆ ಗುಡ್‌ಬೈ ಹೇಳಿ ಹಳ್ಳಿಗೆ ಕಾಲಿಟ್ಟ 12 ಸ್ಪರ್ಧಿಗಳ ಪೈಕಿ ಕೆಲವರು ಶೋನಿಂದ ಅರ್ಧಕ್ಕೆ ಹೊರಡುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ರಿಯಾಲಿಟಿ ಶೋಗೆ ಅಕುಲ್ ಬಾಲಾಜಿ ನಿರೂಪಣೆಯನ್ನು ವಹಿಸಿದ್ದಾರೆ. ಬೆಳಗಾವಿ ಜಿಲ್ಲೆ ಸಂಗೊಳ್ಳಿ ಎಂಬ ಹಳ್ಳಿಯಲ್ಲಿಯೇ ಶೂಟಿಂಗ್ ನಡೆಯುತ್ತಿದೆ. ಪೂರ್ತಿ ನಗರ ಬದುಕಿನಲ್ಲಿ ಬೆಳೆದ ಸ್ಪರ್ಧಿಗಳಿಗೆ ಹಳ್ಳಿ ಜೀವನದ ಅನುಭವ ಹೊಸದಾಗಿದೆ. ಕೆಲವು ಟಾಸ್ಕ್‌ಗಳು ಮೊದಲೇ ದಿನದಲ್ಲಿ ಅವರಿಗೆ ನೂರೆಂಟು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.
ಮೊದಲು 16 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದ್ದು, ಇವರಲ್ಲಿ ಕೇವಲ 12 ಮಂದಿಗೆ ಶೋದಲ್ಲಿ ಭಾಗವಹಿಸುವ ಅವಕಾಶ ದೊರೆಯಬೇಕಿತ್ತು. ಹೀಗಾಗಿ ಹಳ್ಳಿಯ ಜನರೇ ವೋಟಿಂಗ್ ಮೂಲಕ ಆಯ್ಕೆ ಮಾಡಿದರು. 50% ಕ್ಕಿಂತ ಕಡಿಮೆ ಮತ ಪಡೆದವರು ಶೋದಿಂದ ಹೊರ ಹೋಗಿದ್ದಾರೆ. 80% ಕ್ಕಿಂತ ಹೆಚ್ಚು ಮತ ಪಡೆದವರು ನೇರವಾಗಿ ಸೇರ್ಪಡೆಗೊಂಡಿದ್ದಾರೆ. ಮಧ್ಯಮ ಮತ ಪಡೆದವರು ತಾತ್ಕಾಲಿಕವಾಗಿ ಹೋಲ್ಡ್‌ನಲ್ಲಿ ಇರಿಸಲ್ಪಟ್ಟಿದ್ದಾರೆ.
ಅನುಭವವನ್ನು ಇನ್ನಷ್ಟು ವಿಭಿನ್ನಗೊಳಿಸಲು, ಆಯ್ಕೆಯಾದ ಸ್ಪರ್ಧಿಗಳನ್ನು ಮೊದಲಿಗೆ ಫೈವ್‌ಸ್ಟಾರ್ ಹೋಟೆಲ್ ನಲ್ಲಿ ಇಡಲಾಗಿತ್ತು. ಅಲ್ಲಿಂದ ಐಷಾರಾಮಿ ವಾಹನಗಳಲ್ಲಿ ವಿಮಾನ ನಿಲ್ದಾಣ, ನಂತರ ಹುಬ್ಬಳ್ಳಿ ಮೂಲಕ ಬೆಳಗಾವಿಗೆ, ಅಲ್ಲಿಂದ ಸರ್ಕಾರಿ ಬಸ್, ಟ್ರ್ಯಾಕ್ಟರ್ ಮತ್ತು ಎತ್ತಿನಗಾಡಿ ಮೂಲಕ ಸಂಗೊಳ್ಳಿ ಹಳ್ಳಿ ಸೇರಿಸಿದರು.
ಆದರೆ ಅಲ್ಲಿಗೆ ತಲುಪಿದ ಬಳಿಕ, ಸ್ಪರ್ಧಿಗಳು ಹಸುವಿನ ಹಾಲು ಕರೆದು, ಸಗಣಿ ಕ್ಲೀನ್ ಮಾಡುವುದು ಹೀಗೆ ಇವೆಲ್ಲವೂ ನಗರದ ಆಸಕ್ತ ಪೋಷಿತರಿಗೆ ಆಘಾತವಾಯ್ತು. ಕೆಲವರು ಕಣ್ಣೀರಿಟ್ಟರೆ, ಮತ್ತಷ್ಟು ಮಂದಿ ಶೋ ಬಿಡುವ ಮಟ್ಟಿಗೆ ಬೇಸತ್ತು ಹೋಗಿದ್ದಾರೆ ಎನ್ನಲಾಗಿದೆ.
ಪ್ರತಿ ವಾರ ಸ್ಪರ್ಧಿಗಳ ಪರ್ಫಾರ್ಮೆನ್ಸ್ ಆಧಾರದ ಮೇಲೆ ಎಲಿಮಿನೇಷನ್ ನಡೆಯಲಿದೆ. ಜೊತೆಗೆ ಮುಂದಿನ ವಾರಗಳಿಂದ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಪರಿಚಯವಾಗಲಿದೆ. ಇದು ಶೋಗೆ ಮತ್ತಷ್ಟು ಕುತೂಹಲ ಹೆಚ್ಚಿಸಲಿದೆ.
ವರದಿ : ಲಾವಣ್ಯ ಅನಿಗೋಳ