www.karnatakatv.net :ಹುಬ್ಬಳ್ಳಿ- ಅವ್ರೆಲ್ಲಾ ಪಕ್ಷೇತರ ಅಭ್ಯರ್ಥಿಯೊಬ್ಬರ ಪರ ಕಾರ್ಯಕರ್ತರು, ಎಲ್ಲಾ ಪಕ್ಷದವರಂತೆ ಅವ್ರು ಕೂಡ ಪಾಲಿಕೆ ಚುನಾವಣೆಗಾಗಿ ನಡೀತಿದ್ದ ಪ್ರಚಾರದಲ್ಲಿ ಭಾಗಿಯಾಗಿದ್ರು. ಆದ್ರೆ ಅಲ್ಲಿಗೆ ಬಂದ ಇನ್ಸ್ ಪೆಕ್ಟರ್ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ರು ಅಂತ ಪಕ್ಷೇತರ ಅಭ್ಯರ್ಥಿ ಆರೋಪಿಸ್ತಿದ್ದಾರೆ. ಅಸಲಿಗೆ ಅಲ್ಲಿ ನಡೆದದ್ದೇನು ಗೊತ್ತಾ.
ಹುಬ್ಬಳ್ಳಿ ಪಾಲಿಕೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರ್ತಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರೆ ಪಕ್ಷದ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗೆ ನಿನ್ನೆ ಕೂಡ ವಾರ್ಡ್ ನಂಬರ್ 82ರ ಪಕ್ಷೇತರ ಅಭ್ಯರ್ಥಿ ಮೋಹನ್ ಅಸುಂಡಿ ಪ್ರಚಾರಕ್ಕಿಳಿದಿದ್ರು. ನೂರಾರು ಮಂದಿ ಬೆಂಬಲಿಗರ ಜೊತೆ ವಾರ್ಡ್ ಜನರನ್ನು ಭೇಟಿ ಮಾಡಿ ತಮ್ಮ ಪರ ಮತ ಚಲಾಯಿಸಿ ಅಂತ ಮತದಾರರಿಗೆ ಮನವಿ ಮಾಡ್ತಿದ್ರು. ಆದ್ರೆ ಅಲ್ಲಿ ಸೇರಿದ್ದ ನೂರಾರು ಮಂದಿಯನ್ನ ನೋಡಿ ಸಿಟ್ಟಿಗೆದ್ದ ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶ್ಯಾಮರಾವ್ ಸಜ್ಜನ್ ಸಹಜವಾಗಿಯೇ ಕೆಂಡಾಮಂಡಲರಾದ್ರು. ಕೋವಿಡ್ ನಡುವೆಯೂ ಸಾಮಾಜಿಕ ಅಂತರ ಕಾಪಾಡದೆ ಪ್ರಚಾರಕ್ಕಿಳಿದಿದ್ದೀರ ಅಂತ ಪ್ರಶ್ನಿಸಿದ ಇನ್ಸ್ ಪೆಕ್ಟರ್, ಪಕ್ಷೇತರ ಅಭ್ಯರ್ಥಿ ಅಸುಂಡಿ ಮತ್ತು ಕಾರ್ಯಕರ್ತರೊಂದಿಗೆ ವಾಗ್ವಾದಕ್ಕಿಳಿದ್ರು. ಈ ವೇಳೆ ಏರುದನಿಯಲ್ಲಿ ಮಾತನಾಡಿದ ಕಾರ್ಯಕರ್ತನ ವಿರುದ್ಧ ಸಿಟ್ಟಿಗೆದ್ರು.
ಹೀಗಾಗಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಈ ವರ್ತನೆ ಬಗ್ಗೆ ಅಸಮಾಧಾನಗೊಂಡ ಅಭ್ಯರ್ಥಿ ಮೋಹನ್ ಅಸುಂಡಿ, ಕಾಂಗ್ರೆಸ್, ಬಿಜೆಪಿ ಪಕ್ಷದ ನಾಯಕರು ಹಾಗೂ ಶಾಸಕರು ಬಂದು ನೂರಾರು ಜನರೊಂದಿಗೆ ಪ್ರಚಾರ ಮಾಡಿದ್ರು. ಆಗ ಪೊಲೀಸರು ಈ ರೀತಿ ಪ್ರಶ್ನಿಸಲಿಲ್ಲ. ಆದ್ರೆ ನಾನು ಪಕ್ಷೇತರ ಅಭ್ಯರ್ಥಿಯಾದ ಕಾರಣ ಅವರು ನಮ್ಮ ಮೇಲೆ ಈ ರೀತಿಯಾದ ವರ್ತನೆ ತೋರುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು ಇದೆಲ್ಲವನ್ನೂ ನೋಡಿದರೆ ರಾಜಕೀಯ ಕೈವಾಡವಿದೆ, ಪಕ್ಷೇತರ ಅಭ್ಯರ್ಥಿ ಗೆಲ್ಲುತ್ತಾರೆ ಅನ್ನೋ ಭಯದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ. ನ್ಯಾಯ ಎಲ್ಲರಿಗೂ ಒಂದೆ, ಅಧಿಕಾರ ಇದೆ ಅಂತ ಪೊಲೀಸರ ಮೂಲಕ ದರ್ಪ ತೋರಿದ್ರೆ ನಾವು ಕೈ ಕಟ್ಟಿ ಕುಳಿತುಕೊಳ್ಳೋದಿಲ್ಲ, ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದರು.
ಕೋವಿಡ್ 3ನೇ ಅಲೆ ಭಯದಲ್ಲಿ ಆತಂಕ ಸೃಷ್ಟಿಯಾಗಿರೋ ಮಧ್ಯೆಯೇ ಪಾಲಿಕೆ ಚುನಾವಣೆ ಇದೀಗ ಪೊಲೀಸರಿಗೆ ನುಂಗಲಾರದ ತುತ್ತಾಗಿದೆ.
ಕರ್ನಾಟಕ ಟಿವಿ – ಹುಬ್ಬಳ್ಳಿ