Monday, December 23, 2024

Latest Posts

ಕಾಸ್ಟ್ಲಿಯಷ್ಟ್ ಕಾಮಿಡಿಯನ್ ಚಿಕ್ಕಣ್ಣನ ಲೈಫ್‌ಸ್ಟೋರಿ !

- Advertisement -

ಚಿಕ್ಕಣ್ಣ ಹೆಸರು ಮೂರಕ್ಷರ ಮಾತ್ರ ಆದರೆ ಸಾಧನೆ ಮುಗಿಲೆತ್ತರ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತಿರೋ ಸತ್ಯ. ಕಡುಬಡತನದ ಕುಟುಂಬದಿಂದ ಬಂದು ಕಾಸ್ಟ್ಲಿಯೆಷ್ಟ್ ಕಾಮಿಡಿಯನ್ ಆಗಿ ಬೆಳೆದಿದ್ದರ ಹಿಂದೆ ಅಚ್ಚರಿಯ ಕಥನವಿದೆ. ಬಣ್ಣ ಹಚ್ಚೋಕೆ ಮುಂಚೆ ಚಿಕ್ಕಣ್ಣ ಗಾರೆಕೆಲಸ ಮಾಡ್ತಿದ್ರು, ಅದರಿಂದ ಅವರ ಜೀವನ ನಡೆಯುತ್ತಿತ್ತು ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯ. ಆದರೆ, ಸುತ್ತೂರು ಮಟದ ದೈವ ಚಿಕ್ಕಣ್ಣನ ಜೀವನದಲ್ಲಿ ಸೃಷ್ಟಿಸಿದಂತಹ ಪವಾಡದ ಬಗ್ಗೆ ಬಹುಷಃ ನಿಮಗ್ಯಾರಿಗೂ ಗೊತ್ತಿರಲಿಕ್ಕಿಲ್ಲ. ಇದೇ ಮೊದಲ ಭಾರಿಗೆ ಚಿಕ್ಕಣ್ಣ ಸುತ್ತೂರಿನ ಮಹಿಮೆ ಬಗ್ಗೆ ಬಿಚ್ಚಿಟ್ಟಿದ್ದಾರೆ. ದೇವರಿಂದ ಸಿಕ್ಕಿರುವ ವರ, ಅಪ್ಪನ ಕೋಪ, ಅವ್ವನ ಕನಸಿನ ಮನೆ, ಮುಂದಿನ ಗುರಿ, ಚಿಕ್ಕು ಕನಸಿನ ಪಾತ್ರ ಸೇರಿದಂತೆ ಕಂಪ್ಲೀಟ್ ಲೈಫ್‌ಸ್ಟೋರಿಯನ್ನು ನಿಮ್ಮ ಮುಂದೆ ಹರವಿಡಲಿದ್ದೇವೆ. ತಡಮಾಡದೇ ಚಿಕ್ಕು ಜೀವನಗಾಥೆಯನ್ನು ನೋಡ್‌ಬಿಡಿ

ನಾಯಕನ ಪಟ್ಟಾಭಿಷೇಕಕ್ಕೆ ಚಿಕ್ಕಣ್ಣ ರೆಡಿ !

ಚಿಕ್ಕಣ್ಣ ಸ್ಯಾಂಡಲ್‌ವುಡ್‌ನ ಖ್ಯಾತ ಕಾಮಿಡಿಯನ್. ಎಲ್ಲಾ ಸ್ಟಾರ್‌ಗಳ ಫೇವರಿಟ್ ಕಾಮಿಡಿಕಿಂಗ್. ಕಳೆದೊಂದು ದಶಕದಿಂದ ಬೆಳ್ಳಿಪರದೆಯ ಮೇಲೆ ವಿಜೃಂಭಿಸುತ್ತಾ, ಪ್ರೇಕ್ಷಕ ಮಹಾಷಯರಿಗೆ ನಗುವಿನ ಮೂಲಕ ಮೃಷ್ಟಾನ್ನ ಭೋಜನ ಉಣಬಡಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಕಾಸ್ಟ್ಲಿಯಸ್ಟ್ ಕಾಮಿಡಿಯನ್ ಆಗಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಒಂದೇ ಒಂದು ಸೀನ್‌ನಲ್ಲಿ ಬಂದೋಗೋದಕ್ಕೆ ಚಾನ್ಸ್ ಕೊಟ್ಟರೆ ಸಾಕು ಸಿಡಿ ಮಾಡ್ಕೊಂಡು ಇಟ್ಕೊಳ್ಳುತ್ತೇನೆ ಅಂತ ಸಿಂಗಲ್ ಚಾನ್ಸ್ಗಾಗಿ ಬೇಡುತ್ತಿದ್ದ ಚಿಕ್ಕಣ್ಣ ಇವತ್ತು ಹೀರೋ ಜೊತೆ ಫುಲ್‌ಸಿನಿಮಾದಲ್ಲಿ ವಿಜೃಂಭಿಸುತ್ತಾರೆ. ಇದೀಗ ಫುಲ್‌ಫ್ಲೆಡ್ಜ್ ಹೀರೋ ಕೂಡ ಆಗ್ತಿದ್ದಾರೆ. ನಾಯಕನಟನ ಪಟ್ಟಕ್ಕೇರಿ ಬೆಳ್ಳಿಭೂಮಿ ಮೇಲೆ ಮೆರವಣಿಗೆ ಹೊರಡೋದಕ್ಕೆ ಎದುರುನೋಡ್ತಿದ್ದಾರೆ.

ಚಿಕ್ಕಣ್ಣ ಇನ್ಮೇಲೆ ಬೆಳ್ಳಿತೆರೆ `ಉಪಾಧ್ಯಕ್ಷ’ !

ಕಡುಬಡತನದ ಕುಟುಂಬದಿಂದ ಬಂದು ಕಾಮಿಡಿಯನ್ ಆಗಿ ಗುರ್ತಿಸಿಕೊಳ್ಳೋದೇ ದೊಡ್ಡ ಸವಾಲು. ಅಂತ್ರದಲ್ಲಿ ಬಹುಬೇಡಿಕೆಯ ಕಾಮಿಡಿಯನ್ ಪಟ್ಟಕ್ಕೇರಿ ಈಗ ನಾಯಕನಟನಾಗಿ ದಿಬ್ಬಣ ಹೊರಡುವುದಕ್ಕೆ ಸಜ್ಜಾಗಿರುವುದು ಸುಲಭದ ಸಂಗತಿಯಲ್ಲ. ಮೈಸೂರಿನ ಬಲ್ಲಹಳ್ಳಿಯಿಂದ ಬಂದು ಬೆಳ್ಳಿತೆರೆಯನ್ನು ಬ್ಯಾಂಗ್ ಮಾಡ್ತಿರುವ ಚಿಕ್ಕುಗೆ, ನಾಯಕನಾಗಿ ಪಟ್ಟಾಭಿಷೇಕ ಮಾಡೋದಕ್ಕೆ ರಾಬರ್ಟ್ ನಿರ್ಮಾಪಕರು ಸಜ್ಜಾಗಿದ್ದಾರೆ. ಚಿಕ್ಕು ಹೀರೋ ಆಗಿ ಆಕ್ಟ್ ಮಾಡಲಿರುವ ಉಪಾಧ್ಯಕ್ಷ' ಚಿತ್ರಕ್ಕೆ ನಿರ್ಮಾಪಕ ಉಮಾಪತಿಯವರು ಕೋಟಿ ಕೋಟಿ ಬಂಡವಾಳ ಹೂಡೋದಕ್ಕೆ ಮುಂದಾಗಿದ್ದಾರೆ. ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದರೆಉಪಾಧ್ಯಕ್ಷ’ ಚಿತ್ರತಂಡ ಸೆಟ್‌ಗೆ ಲ್ಯಾಂಡ್ ಆಗಲಿದ್ದಾರೆ.

ಬಲ್ಲಹಳ್ಳಿ ಹೈದ ಬೆಳ್ಳಿತೆರೆಯಲ್ಲಿ ಬ್ರ್ಯಾಂಡ್ ಆಗಿದ್ದೇಗೆ ಗೊತ್ತಾ ?

ಚಿಕ್ಕಣ್ಣನ ಸಿನಿಜರ್ನಿಯನ್ನು ನೋಡಿದ್ರೆ ವಾವ್ ಎನಿಸುತ್ತೆ. ಸಿನಿಮಾ ಹಿನ್ನಲೆ ಇಲ್ಲದೇ, ಗಾಡ್‌ಫಾದರ್‌ಗಳ ಸಪೋರ್ಟ್ ಇಲ್ಲದೇ ಸಾಮಾನ್ಯ ಕುಟುಂಬದಿಂದ ಬಂದು ಬಣ್ಣದ ಲೋಕದಲ್ಲಿ ಬ್ರ್ಯಾಂಡ್ ಆಗಿರೋದನ್ನ ನೋಡಿದ್ರೆ ಅಚ್ಚರಿಯಾಗುತ್ತೆ. ಇದಕ್ಕೆ ಮೊದಲ ಕಾರಣ ಸಿನಿಮಾಪ್ರೇಮಿಗಳ ಆಶೀರ್ವಾದವಾದರೆ, ಎರಡನೇ ಕಾರಣ ಚಿಕ್ಕಣ್ಣನಿಗೆ ಬಣ್ಣದ ಮೇಲಿರುವ ಭಕ್ತಿ,ಪಾತ್ರದ ಮೇಲಿರುವ ಶ್ರದ್ಧೆ. ತನ್ನೊಳಗೆ ಎಷ್ಟೇ ನೋವು ತುಂಬಿದ್ದರೂ ಕೂಡ ತೆರೆಮೇಲೆ ತೋರಿಸಿಕೊಳ್ಳದೇ ಹಾಸ್ಯದ ಹೊನಲನ್ನು ಹರಿಸುವ ಪರಿ. ಸಹಜ ಅಭಿನಯದ ಜೊತೆಗೆ ಮಂಡ್ಯ ಭಾಷೆ ಮಾತನಾಡುತ್ತಾ, ಕಾಮಿಡಿ ಕಿಕ್ಕೇರಿಸುತ್ತಾ ಹಾಸ್ಯಲೋಕಕ್ಕೆ ಕರೆದೊಯ್ಯುವ ಚಿಕ್ಕು ಟೆಕ್ನಿಕ್‌ಗೆ ಪ್ರೇಕ್ಷಕಮಹಾಷಯರು ಕಳೆದೋಗುತ್ತಾರೆ.

ಒಪ್ಪೊತ್ತಿನ ಊಟಕ್ಕೂ ಕಷ್ಟ ಪಟ್ಟಿದ್ದಾರೆ ಚಿಕ್ಕಣ್ಣ !

ತೆರೆಮೇಲೆ ನಗಿಸೋ ಕಲಾವಿದನ ಬಾಳಲ್ಲಿ ನಗು ಇರೋದಿಲ್ಲ ಬದಲಾಗಿ ಕಷ್ಟ-ದುಃಖ-ನೋವುಗಳೇ ತುಂಬಿರುತ್ತವೆ ಎಂಬ ಮಾತನ್ನ ನಾವು-ನೀವೆಲ್ಲರೂ ಕೇಳಿದ್ದೇವೆ. ಅದು ಅಕ್ಷರಶಃ ನಿಜ ಕೂಡ ಹೌದು. ಹಾಗಂತ ಎಲ್ಲಾ ಹಾಸ್ಯಕಲಾವಿದರ ಬಾಳಲ್ಲೂ ನಗು ಇರಲ್ಲ ಅಂತಲ್ಲ. ಕೆಲವೊಬ್ಬರ ಜೀವನದಲ್ಲಿ ನಗುವಿನ ಬದಲಾಗಿ ನೋವು ತಾಂಡವಾಡುತ್ತಿರುತ್ತೆ. ಇದಕ್ಕೆ ಚಿಕ್ಕಣ್ಣನ ಅಂದಿನ ಬದುಕು ಕೂಡ ಹೊರತಾಗಿರಲಿಲ್ಲ. ಒಪ್ಪೊತ್ತಿನ ಊಟಕ್ಕೂ ಸಾಧ್ಯವಾಗದ ದಿನಗಳನ್ನ ಕಾಣುವ ಪರಿಸ್ಥಿತಿಯನ್ನ ಚಿಕ್ಕಣ್ಣ ಎದುರಿಸಿದ್ದಾರೆ. ಮನೆಯಲ್ಲಿನ ಬಡತನ ನೋಡಲಾರದೇ ಎಸ್‌ಎಸ್‌ಎಲ್‌ಸಿ ನಂತರ ವಿದ್ಯಾಭ್ಯಾಸಕ್ಕೆ ಬ್ರೇಕ್ ಹಾಕಿ ಕರಣೆ ಹಿಡಿದು ಗಾರೆಕೆಲಸ ಮಾಡಿದ್ದಾರೆ.

ಚಿಕ್ಕಣ್ಣ ಗಾರೆಕೆಲಸ ಮಾಡಿ ಜೀವನಸಾಗಿಸುತ್ತಿದ್ದರು ಎಂಬುದು ನಿಮ್ಮೆಲ್ಲರಿಗೂ ಗೊತ್ತಿರೋ ಸತ್ಯ. ಆದರೆ, ಕಾಮಿಡಿ ಖಿಲಾಡಿಗಳು ಶೋನಲ್ಲಿ ಅವಕಾಶ ಸಿಕ್ಕಮೇಲೂ, ಕಿರಾತಕ ಚಿತ್ರದಲ್ಲಿ ಮಿಂಚಿದ ಮೇಲೂ ಕೂಡ ಗಾರೆಕೆಲಸ ಮಾಡುತ್ತಿದ್ದರಂತೆ. ಇದಕ್ಕೆ ಕಾರಣ, ಬಣ್ಣದ ಲೋಕ ನನ್ನ ಕೈಹಿಡಿಯಲಿಲ್ಲ ಅಂದರೆ, ಅವಕಾಶಗಳು ಸಿಗಲಿಲ್ಲ ಅಂದರೆ ಜೀವನ ಹೆಂಗೆ ನಡೆಸಲಿ ಅಂತ ಮೂಲವೃತ್ತಿ ಗಾರೆಕೆಲಸವನ್ನು ಕೈಬಿಟ್ಟಿರಲಿಲ್ಲವಂತೆ. ಹೀಗೆ, ಚಿಕ್ಕು ಕಾಯಕ ಮಾಡುತ್ತಾ ಸಾಗುತ್ತಿರುವಾಗ ಚಾಮುಂಡೇಶ್ವರಿ ಪಾದದ ಕೆಳಭಾಗದಲ್ಲಿರುವ ಸುತ್ತೂರು ಮಟದ ಬೆಟ್ಟವನ್ನು ಏರಿ ಇಳಿದಾಗ ಒಂದು ಪವಾಡ ನಡೆಯುತ್ತೆ. ಆ ಪವಾಡ ಏನು ಅಂತೀರಾ? ಹೇಳ್ತೀವಿ

ಚಿಕ್ಕಣ್ಣನ ಜೀವನದಲ್ಲಿ ಮಠದ ಪವಾಡ !

ಸುತ್ತೂರು ಮಟದಲ್ಲಿ ಚಿಕ್ಕಣ್ಣ ಗಾರೆ ಕೆಲಸ ಒಪ್ಕೊಂಡಿರ‍್ತಾರೆ. ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಎದ್ದು ಸ್ನಾನ ಮಾಡಿ ಬೆಟ್ಟ ಹತ್ತಿ ದೇವರ ದರ್ಶನ ಮಾಡಿ ನಂತರ ಕೆಲಸ ಶುರುಮಾಡುವುದು ಅಭ್ಯಾಸ. ಹೀಗೆ, ದರ್ಶನ ಮಾಡಿ ಬೆಟ್ಟ ಇಳಿಯುವಾಗ `ಇನ್ನೆಷ್ಟು ದಿನ ನಾನು ಇದೇ ಗಾರೆ ಕೆಲಸ ಮಾಡ್ಕೊಂಡು ಜೀವನ ಮಾಡಲಿ ಅಂತ ನೊಂದುಕೊಳ್ತಾರೆ’ ಚಿಕ್ಕಣ್ಣನ ಆ ನೋವು ಸುತ್ತೂರು ಮಠದ ದೈವಕ್ಕೆ, ತಾಯಿ ಚಾಮುಂಡೇಶ್ವರಿಗೆ ಕೇಳಿಸ್ತೋ ಏನೋ ಅವತ್ತಿಗೆ ಕೊನೆ ಚಿಕ್ಕಣ್ಣ ಕರಣೆ ಹಿಡಿದು ಗಾರೆಕೆಲಸಕ್ಕೆ ಹೋಗ್ಲೆ ಇಲ್ಲ. ಯಾಕಂದ್ರೆ, ಬಣ್ಣದ ಲೋಕದಲ್ಲಿ ಅಷ್ಟು ಬ್ಯುಸಿಯಾಗಿಬಿಟ್ಟರು. ರಿಯಾಲಿಟಿ ಶೋಗಳ ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲೂ ಅಭಿನಯಿಸೋದಕ್ಕೆ ಅವಕಾಶ ಸಿಗ್ತು.

ಚಿಕ್ಕಣ್ಣ ಚಿತ್ರರಂಗಕ್ಕೆ ಬರಲು ಕಾರಣ ಯಶ್ !

ಚಿಕ್ಕಣ್ಣ ಸಿನಿಮಾ ಇಂಡಸ್ಟಿçಗೆ ಬರೋದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್. ಕನ್ನಡ ಡೈಮಂಡ್ ಜ್ಯೂಬಿಲಿ ಸೆಲಬ್ರೇಷನ್‌ನಲ್ಲಿ ಚಿಕ್ಕಣ್ಣನ ಅಭಿನಯ ಕಂಡು ಥ್ರಿಲ್ಲಾದ ಯಶ್, ಕಿರಾತಕ ಸಿನಿಮಾಗೆ ರೆಫರ್ ಮಾಡಿದರು. ಅಲ್ಲಿಂದ ಚಿಕ್ಕಣ್ಣನ ಬಣ್ಣದ ಪಯಣ ಶುರುವಾಯ್ತು. ರಾಜಾಹುಲಿ, ಲಕ್ಕಿ, ಜಾನು, ಮಾಸ್ಟರ್ ಪೀಸ್ ಚಿತ್ರಗಳಲ್ಲಿ ಅಣ್ತಮ್ಮನ ಜೊತೆ ಜಾದು ಮಾಡಿದರು. ಇಲ್ಲಿವರೆಗೂ ಸುಮಾರು 220 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಂದ್ಹಾಗೇ, ಚಿಕ್ಕಣ್ಣನಿಗೆ ನಾಟಕ ಅಂದ್ರೆ ಭಲೇ ಹುಚ್ಚು. ಹೀಗಾಗಿಯೇ ಅಪ್ಪನ ವಿರೋಧ ಕಟ್ಟಿಕೊಂಡು ಅಂದೇ ಮೈಸೂರಿನ ದೃಶ್ಯಕಲಾವಿದೆ ನಾಟಕ ಮಂಡಳಿ ಸೇರಿದ್ದರು. ಚಿಕ್ಕಣ್ಣನ ನಾಟಕ ಅಭಿನಯ ಕಂಡು ಜೀಕನ್ನಡದವರು ಕಾಮಿಡಿ ಖಿಲಾಡಿಗಳಿಗೆ ಸೆಲೆಕ್ಟ್ ಮಾಡಿಕೊಂಡರು. ಉದಯ ಟಿವಿಯಲ್ಲಿ ಫ್ರಾಂಕ್ ಶೋಗೆ ಆಂಕರ್ ಆಗಿ ಕೆಲಸ ಮಾಡಿದರು. ಹೀಗೆ, ಕಿರುತೆರೆ ಹಾಗೂ ಬೆಳ್ಳಿತೆರೆ ಎರಡಲ್ಲೂ ಮಿಂಚಿ ಹವಾ ಸೃಷ್ಟಿಸಿಕೊಂಡರು. ಐಫಾ, ಸೈಮಾ ಸೇರಿದಂತೆ ಜೀ ಕನ್ನಡ ಹೆಮ್ಮೆಯ ಹಾಸ್ಯ ನಟ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಚಿಕ್ಕುಗೆ ನಾಟಕ ಅಂದ್ರೆ ಭಲೇ ಹುಚ್ಚು !

ಚಿಕ್ಕಣ್ಣ ನಾಟಕ ಮಾಡೋದು ಅವರ ತಂದೆಗೆ ಇಷ್ಟ ಇರಲಿಲ್ಲ. ಬಣ್ಣ ಹಚ್ಚಿಕೊಂಡು ನಾಟಕ ಮಾಡ್ತೀನಿ ಅಂತ ಚಿಕ್ಕಣ್ಣ ಹೊರಟರೆ ಮಗನೇ ನೀ ಸ್ಟೇಜ್ ಹತ್ತಿದ್ದರೆ ಕೊಚ್ಚಾಕ್ತೀನಿ ಅಂತ ಮಚ್ಚು ಎತ್ಕೊಂಡೇ ಹೋಗೋರಂತೆ. ಅಪ್ಪ ಎಷ್ಟೇ ಅಡ್ಡಿಮಾಡಿದರೂ ಕೂಡ ಹಠಕ್ಕೆ ಬಿದ್ದ ಚಿಕ್ಕಣ್ಣ, ಹಗಲೊತ್ತು ಗಾರೆ ಕೆಲಸ ಮಾಡಿ ರಾತ್ರಿ ವೇಳೆ ನಾಟಕ ಪ್ರಾಕ್ಟೀಸ್ ಮಾಡ್ಕೊಂಡು ಹೈಕ್ಳ ಜೊತೆಗೆ ನಾಟಕ ಪ್ರದರ್ಶನಕ್ಕೆ ಹೋಗುತ್ತಿದ್ದರಂತೆ. ಹೀಗೆ ನಾಟಕದ ಮೇಲಿದ್ದ ಗೀಳು ಚಿಕ್ಕಣ್ಣ ಬಣ್ಣ ಹಚ್ಚುವಂತೆ ಮಾಡ್ತು. ಅಂದ್ಹಾಗೇ ಚಿಕ್ಕಣ್ಣ ತಾನೊಬ್ಬ ಕಾಮಿಡಿಯನ್ ಆಗ್ತೀನಿ ಅಂತ ಕನಸು ಮನಸಲ್ಲೂ ಎಣಿಸಿರಲಿಲ್ಲವಂತೆ. ತಾನೊಬ್ಬ ಖಳನಾಯಕ ಆಗ್ಬೇಕು ಎಂಬುದು ಅವರ ಕನಸು. ಇಂದಿಗೂ ಅವರ ಕನಸು ಈಡೇರಿಲ್ಲ. ಯಾರಾದ್ರೂ ನನಗೆ ಸಿನಿಮಾದಲ್ಲಿ ವಿಲನ್ ಪಾತ್ರ ಕೊಟ್ಟರೆ ಸಂಭಾವನೆ ಕೇಳದೇ ಫ್ರೀಯಾಗಿ ನಟಿಸ್ತೀನಿ ಅಂತಾರೇ. ಇನ್ನೇನಿದ್ರೂ ಚಿಕ್ಕಣ್ಣನ ಈ ಕನಸನ್ನ ಈಡೇರಿಸೋಕೆ ಪ್ರೊಡ್ಯೂಸರ್ಸ್ ಮುಂದೆ ಬರಬೇಕು ಅಷ್ಟೇ.

ನಡೆದು ಬಂದ ಹಾದಿ ಮರೆತ್ತಿಲ್ಲ ಚಿಕ್ಕಣ್ಣ !

ಬಾಲಣ್ಣ ಹಾಗೂ ಸಾಧುಕೋಕಿಲ ಅವರನ್ನು ಸ್ಪೂರ್ತಿಯಾಗಿಸಿಕೊಂಡಿರುವ ಚಿಕ್ಕಣ್ಣ, ಕಾಸ್ಟ್ಲಿಯಸ್ಟ್ ಕಾಮಿಡಿಯನ್ ಆಗಿ ಬಹುಬೇಡಿಕೆಯ ಹಾಸ್ಯಗಾರನಾಗಿ ಬೆಳೆದುನಿಂತಿದ್ದಾರೆ. ಆದರೆ, ತಾವು ಬೆಳೆದುಬಂದ ಹಾದಿಯನ್ನ ಮರೆತಿಲ್ಲ. ಕಷ್ಟದ ಹಾದಿಯಲ್ಲಿ ನೆರವಾದವರು, ಬಿದ್ದಾಗ ಮೇಲಕ್ಕೆ ಎತ್ತಿದ್ದವರು, ಕೈಹಿಡಿದು ಜೊತೆ ನಡೆಸಿದವರು, ಬಾಲ್ಯದ ಸ್ನೇಹಿತರು, ಗಾರೆಕೆಲಸದ ಜೊತೆಗಾರರು ಹೀಗೆ ಎಲ್ಲರೊಟ್ಟಿಗೆ ಅದೇ ಆತ್ಮೀಯತೆಯನ್ನ ಅನುಭಂದವನ್ನ ಹೊಂದಿದ್ದಾರೆ. ಅಟ್ ದಿ ಸೇಮ್ ಟೈಮ್ ಯಶ್-ದರ್ಶನ್- ಸುದೀಪ್-ಪುನೀತ್-ಧ್ರುವ ಸೇರಿದಂತೆ ಎಲ್ಲಾ ಸೂಪರ್ ಸ್ಟಾರ್‌ಗಳೊಟ್ಟಿಗೆ ಸುಮಧುರ ಬಾಂದವ್ಯವನ್ನ ಕಾಯ್ದುಕೊಂಡಿದ್ದಾರೆ. ಎಲ್ಲಾ ಸ್ಟಾರ್‌ಗಳ ಸಿನಿಮಾಗಳಲ್ಲೂ ಚಿಕ್ಕು ಕಾಮಿಡಿ ಕಿಕ್ಕೇರಿಸ್ತಾರೆ.

ಅಪ್ಪ ಇದ್ದಿದ್ದರೆ ಈ ಕೆಲಸ ಮಾಡ್ತಿದ್ದರು ಚಿಕ್ಕಣ್ಣ !

ಇಷ್ಟೆಲ್ಲಾ ಹೇಳಿದ್ಮೇಲೆ ಅಪ್ಪ ಇದ್ದಿದ್ರೆ ಏನ್ ಮಾಡ್ತಿದ್ದೆ ಗೊತ್ತಾ ಅಂತ ಚಿಕ್ಕಣ್ಣ ಹೇಳಿಕೊಂಡಿರುವ ಸಂಗತಿಯನ್ನ ನಿಮಗೆ ಹೇಳಲೆಬೇಕು. ಚಿಕ್ಕಣ್ಣ ಅವರ ತಂದೆ ಜೀವಂತವಾಗಿ ಉಳಿದಿಲ್ಲ. ಒಂದ್ವೇಳೆ ಅವರ ತಂದೆ ಇವತ್ತು ಬದುಕಿದ್ದಿದ್ದರೆ ಐದು ಲಕ್ಷ ಬೆಲೆಬಾಳುವ ಓರಿಗಳನ್ನ ಕೊಡಿಸುತ್ತಿದ್ದರಂತೆ. ಹೌದು, ಚಿಕ್ಕಣ್ಣ ಅವರ ತಂದೆ ಇಡೀ ಊರಿನಲ್ಲಿ ಯಾರೂ ಕಟ್ಟಿರಬಾರದು ಅಂತಹ ಓರಿಗಳನ್ನ ಕಟ್ಟಬೇಕು ಎಂಬ ಕನಸಿತ್ತಂತೆ. ಆ ಕನಸನ್ನ ಈಡೇರಿಸೋಕೆ ಆಗಲಿಲ್ಲ ಎನ್ನುವ ಕೊರಗು ಚಿಕ್ಕಣ್ಣಗೆ ಇವತ್ತಿಗೂ ಕಾಡ್ತಿದೆ. ಜೊತೆಗೆ ಅಪ್ಪನಿಗೆ ಬೆಂಗಳೂರು ತೋರಿಸೋದಕ್ಕೆ ಆಗಲಿಲ್ಲವಲ್ಲ ಎನ್ನುವ ನೋವಿದೆ. ಹೀಗಾಗಿ, ಸದ್ಯ ತಾಯಿಯ ಕನಸನ್ನ ಚಿಕ್ಕಣ್ಣ ಈಡೇರಿಸುತ್ತಿದ್ದಾರೆ. ಮೈಸೂರಿನಲ್ಲಿ ಮನೆ ಕಟ್ಟಬೇಕು ಎಂಬುದು ಚಿಕ್ಕಣ್ಣ ಅವರ ತಾಯಿ ಆಸೆ ಅದು ಈಗ ಈಡೇರ್ತಿದೆ.

ಸದ್ಯ ಚಿಕ್ಕಣ್ಣ ಮೈಸೂರಿನಲ್ಲಿ ಫಾರ್ಮ್ಹೌಸ್ ಮಾಡಿ ಪ್ರಾಣಿ-ಪಕ್ಷಿಗಳ ಹಾರೈಕೆ ಮಾಡ್ತಿದ್ದಾರೆ. ಒಂದೊತ್ತಿನ ಊಟಕ್ಕೂ ಎಷ್ಟು ಕಷ್ಟ ಅನ್ನೋದನ್ನು ಅರಿತುಕೊಂಡಿರುವ ಚಿಕ್ಕಣ್ಣ, ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಅದೆಷ್ಟೋ ಬಡಬಗ್ಗರ, ನಿರ್ಗತಿಕರ, ಅಸಾಹಯಕರ ಹಸಿವು ನೀಗಿಸಿದ್ದರು. ಹಸಿದು ಬಂದವರಿಗೆ ತಾವೇ ಸ್ವತಃ ಅಡುಗೆ ಮಾಡಿ ಬಡಿಸೋದ್ರಲ್ಲಿ ತೃಪ್ತಿ ಎನ್ನುವ ಚಿಕ್ಕಣ್ಣ ಜೀವನದಲ್ಲಿ ಇನ್ನೂ ಎತ್ತರಕ್ಕೆ ಬೆಳೆದು ನಿಲ್ಲಬೇಕು. ಒಂದಷ್ಟು ಜನರನ್ನ ನಗಿಸೋದು ನನಗೆ ದೇವರಿಂದ ಸಿಕ್ಕಿರುವ ವರವೆಂದು ಭಾವಿಸಿರುವ ಚಿಕ್ಕಣ್ಣ ಜೀವನದುದ್ದೂ ನಗುನಗುತ್ತಾ ಬಾಳಬೇಕು.

ಚಿಕ್ಕಣ್ಣ ಹೆಸರಿಗೆ ಮಾತ್ರ ಅಣ್ಣ ಆದರೆ ಅದೆಷ್ಟೋ ಹುಡುಗೀರ್ ಪಾಲಿಗೆ ಡಾರ್ಲಿಂಗ್. 36 ಆದರೂ ಮಿಂಗಲಾಗದೇ ಸಿಂಗಲ್ ಆಗಿರುವ ಚಿಕ್ಕಣ್ಣ ಹೆಣೈಕ್ಳ ಕೆಂಪಾದ ಹೃದಯದಲ್ಲಿ ಗೀಟಾರ್ ಬಾರಿಸುತ್ತಿರುವುದಂತೂ ಸತ್ಯ. ಎನಿವೇ, ಚಿಕ್ಕಣ್ಣ ಇದೇ ಫಿಟ್ನೆಸ್ ಮೆಂಟೇನ್ ಮಾಡ್ಕೊಂಡು ಇನ್ನೊಂದಿಷ್ಟು ದಿನ ಸಿಂಗಲ್ಲಾಗೇ ಇರಲಿ. ಮುಂದಿನ ದಿನಗಳಲ್ಲಿ ಮಿಂಗಲ್ಲಾಗಿ ಖುಷಿಖುಷಿಯಾಗಿ ಲೈಫ್ ಲೀಡ್ ಮಾಡಲಿ ಅನ್ನೋದೇ ಹೆಣೈಕ್ಳ ಆಶಯ

ವಿಶಾಲಾಕ್ಷಿ ಎಂಟರ್‌ಟೈನ್ಮೆಂಟ್ ಬ್ಯೂರೋ ಕರ್ನಾಟಕ ನ್ಯೂಸ್

- Advertisement -

Latest Posts

Don't Miss