ಹುಷಾರು ಮಾಡಲು ತಯಾರಾದ ಔಷಧಿಗಳೇ ಈಗ ವಿಷದ ರೀತಿಯಲ್ಲಿ ಜೀವ ತೆಗೆದುಕೊಳ್ಳುತ್ತಿರುವ ಘಟನೆಗಳು ಚಿಂತಾಜನಕವಾಗಿವೆ. ಇತ್ತೀಚೆಗೆ ಕೆಮ್ಮಿನ ಸಿರಪ್ನಿಂದ 24 ಮಕ್ಕಳ ಸಾವಿಗೆ ಕಾರಣವಾದ ವಿವಾದ ಇನ್ನೂ ತಣ್ಣಗಾಗದೇ ಇರಲು, ಇದೀಗ ಮಧ್ಯಪ್ರದೇಶದಲ್ಲಿ ಮತ್ತೊಂದು ಔಷಧಿ ಭೀತಿ ಪಸರಿಸಿದೆ. ಕೆಮ್ಮಿನ ಸಿರಪ್ನ ವಿಷಕಾರಿ ಪರಿಣಾಮದ ಬಳಿಕ, ಈ ಬಾರಿ ಆ್ಯಂಟಿಬಯಾಟಿಕ್ ಔಷಧಿಗಳ ಸುರಕ್ಷತೆ ಪ್ರಶ್ನಾರ್ಹವಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ನೀಡಲಾಗಿದ್ದ ಅಜಿಥ್ರೊಮೈಸಿನ್ ಪ್ರತಿಜೀವಕ ಔಷಧದ ಬಾಟಲಿಯಲ್ಲಿ ಹುಳುಗಳು ಕಂಡುಬಂದಿವೆ ಎಂಬ ಗಂಭೀರ ದೂರು ಹೊರಬಿದ್ದಿದೆ. ಮೊರಾರ್ ಸರ್ಕಾರಿ ಆಸ್ಪತ್ರೆಯ ಮಹಿಳೆಯೊಬ್ಬರು ಈ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದಾರೆ ಎಂದು ಡ್ರಗ್ ಇನ್ಸ್ಪೆಕ್ಟರ್ ಅನುಭೂತಿ ಶರ್ಮಾ ದೃಢಪಡಿಸಿದ್ದಾರೆ.
ಮಹಿಳೆ ತಂದಿದ್ದ ಬಾಟಲಿ ಈಗಾಗಲೇ ತೆರೆದ ಸ್ಥಿತಿಯಲ್ಲಿದ್ದರೂ, ವಿಷಯ ಬೆಳಕಿಗೆ ಬಂದ ಕೂಡಲೇ ಅಧಿಕಾರಿಗಳು ತುರ್ತು ತನಿಖೆ ಆರಂಭಿಸಿದ್ದಾರೆ. ಮೊರಾರ್ ಆಸ್ಪತ್ರೆಯಲ್ಲಿ ವಿತರಣೆ ಮತ್ತು ಸಂಗ್ರಹಣೆಯಲ್ಲಿದ್ದ ಈ ಔಷಧಿಯ ಒಟ್ಟು 306 ಬಾಟಲಿಗಳನ್ನು ತಕ್ಷಣವೇ ಹಿಂಪಡೆದು ವಶಪಡಿಸಿಕೊಳ್ಳಲಾಗಿದೆ. ಸಂಪೂರ್ಣ ಸ್ಟಾಕ್ ಸೀಲ್ ಮಾಡಲಾಗಿದ್ದು, ಮಾದರಿಗಳನ್ನು ಭೋಪಾಲ್ನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ.
ಅಜಿಥ್ರೊಮೈಸಿನ್ ಸಾಮಾನ್ಯವಾಗಿ ಮಕ್ಕಳಲ್ಲಿ ವಿವಿಧ ಸೋಂಕುಗಳಿಗೆ ಬಳಸುವ ಜೆನೆರಿಕ್ ಔಷಧಿಯಾಗಿದ್ದು, ಇದು ಮಧ್ಯಪ್ರದೇಶದ ಸ್ಥಳೀಯ ಕಂಪನಿಯೊಂದರಿಂದ ತಯಾರಿಸಲ್ಪಟ್ಟಿದೆ. ಪ್ರಾಥಮಿಕ ತಪಾಸಣೆಯಲ್ಲಿ ಕೆಲವು ಬಾಟಲಿಗಳಲ್ಲಿ ಯಾವುದೇ ಕೀಟ ಅಥವಾ ದೂಷಿತ ಲಕ್ಷಣಗಳು ಕಂಡುಬರದಿದ್ದರೂ, ಸಂಪೂರ್ಣ ಪರೀಕ್ಷೆ ಅಗತ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಭೋಪಾಲ್ನ ಜೊತೆಗೆ ಕೋಲ್ಕತ್ತಾದ ಕೇಂದ್ರ ಔಷಧ ಪ್ರಯೋಗಾಲಯಕ್ಕೂ ಮಾದರಿಗಳನ್ನು ಕಳುಹಿಸುವ ಯೋಜನೆಯಿದೆ ಎಂದು ಶರ್ಮಾ ತಿಳಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ