Sunday, October 5, 2025

Latest Posts

ಕೆಮ್ಮು ಸಿರಪ್ ದುರಂತ – ಮಕ್ಕಳ ಸಾವು 9ಕ್ಕೆ ಏರಿಕೆ!

- Advertisement -

ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ಕೇವಲ 15 ದಿನಗಳಲ್ಲಿ ಮೂತ್ರಪಿಂಡ ವೈಫಲ್ಯದಿಂದ 9 ಮಕ್ಕಳು ಸಾವನ್ನಪ್ಪಿವೆ. ಇದು ಗ್ರಾಮದ ಜನರಲ್ಲಿ ಭಯ ಭೀತಿಯ ವಾತಾವರಣ ಉಂಟುಮಾಡಿದೆ. ಆರಂಭದಲ್ಲಿ ಸಾಮಾನ್ಯ ಜ್ವರ-ಕೆಮ್ಮಿನ ಪ್ರಕರಣಗಳಂತೆ ಕಾಣುತ್ತಿದ್ದ ಘಟನೆಗಳು ಈಗ ಮಾರಕ ತಿರುವು ಪಡೆದುಕೊಂಡಿದ್ದು, ಆರೋಗ್ಯ ಇಲಾಖೆಯನ್ನು ಎಚ್ಚರಗೊಳಿಸಿವೆ.

ಚಿಂದ್ವಾರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಶುಭಂ ಯಾದವ್ ಈ ಬಗ್ಗೆ ತಿಳಿಸಿದ್ದಾರೆ. ಅಕ್ಟೋಬರ್ 1ರ ವೇಳೆಗೆ 6 ಸಾವುಗಳಾಗಿವೆ. ಈಗ ಸಾವುಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ರಾಜ್ಯಾದ್ಯಂತ ಸಂಬಂಧಿತ ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ (dextromethorphan hydrobromide) ಸಿರಪ್ ಬ್ಯಾಚ್‌ಗಳ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ, ಶೀತ, ಜ್ವರ ಮತ್ತು ಜ್ವರ ತರಹದ ರೋಗಲಕ್ಷಣಗಳಿಂದ ಬಳಲುತ್ತಿರುವ 1,420 ಮಕ್ಕಳ ಪಟ್ಟಿಯನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಎರಡು ದಿನಗಳಿಗಿಂತ ಹೆಚ್ಚು ಕಾಲ ಅನಾರೋಗ್ಯದಿಂದ ಬಳಲುತ್ತಿರುವ ಯಾವುದೇ ಮಗುವನ್ನು ಸಿವಿಲ್ ಆಸ್ಪತ್ರೆಯಲ್ಲಿ ಆರು ಗಂಟೆಗಳ ಕಾಲ ಮೇಲ್ವಿಚಾರಣೆಯಲ್ಲಿ ಇರಿಸಲಾಗುತ್ತದೆ.

ಸ್ಥಿತಿ ಹದಗೆಟ್ಟರೆ, ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಒಮ್ಮೆ ಸ್ಥಿರವಾದ ನಂತರ, ಅವರನ್ನು ಮನೆಗೆ ಕಳುಹಿಸಲಾಗುತ್ತದೆ. ಆಶಾ ಕಾರ್ಯಕರ್ತರು ಅವರ ಮೇಲೆ ನಿಗಾ ಇಡುವುದನ್ನು ಮುಂದುವರಿಸುತ್ತಾರೆ. ಇನ್ನು ರಾಜಸ್ತಾನದಲ್ಲೂ ಕೂಡ ಕೆಮ್ಮಿನ ಸಿರಪ್ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಕೆಮ್ಮಿನ ಸಿರಪ್ ಸೇವಿಸಿದ ನಂತರ ಮಕ್ಕಳು ಅಸ್ವಸ್ಥರಾಗುತ್ತಿರುವ ಬಗ್ಗೆ ಇಲಾಖೆಗೆ ದೂರುಗಳು ಕೂಡ ಬಂದಿವೆ.

ಸಾವನ್ನಪ್ಪಿದ ಮಕ್ಕಳಲ್ಲಿ ಕನಿಷ್ಠ 5 ಮಕ್ಕಳು ‘ಕೋಲ್ಡ್ರೆಫ್’ (Coldref) ಸಿರಪ್ ಸೇವನೆ, 1 ಮಗು ‘ನೆಕ್ಸ್ಟ್ರೋ’ (Nextro) ಸಿರಪ್ ಸೇವಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಗ್ಯ ಇಲಾಖೆ ಈಗಾಗಲೇ ಖಾಸಗಿ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿಲಾಗಿದೆ. ಯಾವುದೇ ವೈರಲ್ ರೋಗಿಗಳಿಗೆ ಸ್ವತಃ ಚಿಕಿತ್ಸೆ ನೀಡಬಾರದು, ನೇರವಾಗಿ ಸಿವಿಲ್ ಆಸ್ಪತ್ರೆಗೆ ಕಳುಹಿಸಬೇಕು ಎಂದು ಆದೇಶಿಸಿದೆ.

ರಾಜಸ್ಥಾನ ವೈದ್ಯಕೀಯ ಸೇವೆಗಳ ನಿಗಮ ಸಿರಪ್‌ನ 19 ಬ್ಯಾಚ್‌ಗಳ ಮಾರಾಟ ಹಾಗೂ ಬಳಕೆಗೆ ನಿಷೇಧ ಹೇರಿದೆ. ಪೋಷಕರು, ವೈದ್ಯರು ಹಾಗೂ ಮೆಡಿಕಲ್ ಸ್ಟೋರ್ ನಿರ್ವಾಹಕರಿಗೆ ಎಚ್ಚರಿಕೆಯಿಂದಿರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss