ಪಾಲಿಕೆ ಮಾಸ್ಟರ್ ಪ್ಲಾನ್; ದನಗಳಿಗೂ ಬಂತು ಆಧಾರ್ ಕಾರ್ಡ್!

 

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಬಿಡಾಡಿ‌ ದನಗಳು ಹಾಗೂ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅದೆಷ್ಟೋ ಸಲ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬೀದಿ ನಾಯಿ ಹಾಗೂ ಬಿಡಾಡಿ ದನಗಳ ಹಾವಳಿಯ ಚರ್ಚೆ ತಾರಕಕ್ಕೆ‌ರುತ್ತಿದೆ. ಈ ನಿಟ್ಟಿನಲ್ಲಿ ಈಗ ಪಾಲಿಕೆಯ ಬಿಡಾಡಿ ದನಗಳ ನಿಯಂತ್ರಣಕ್ಕೆ ಪ್ಲಾನ್ ಮಾಡಿದೆ. ಆದರೆ ಬೀದಿ‌ ನಾಯಿಗಳ ನಿಯಂತ್ರಣದ ಬಗ್ಗೆ ಮೌನ ವಹಿಸಿದೆ.

ಆಧಾರ್ ಮಾದರಿಯಲ್ಲಿಯೇ ಅವಳಿನಗರ ವ್ಯಾಪ್ತಿಯ ಜಾನುವಾರುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಮೂಲಕ ಅವುಗಳ ಪತ್ತೆ ಸರಳೀಕರಣಗೊಳಿಸಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ಹೌದು ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಸಮಸ್ಯೆಯಿಂದಾಗಿ ಜಾನುವಾರುಗಳಿಗೆ ಎನಿಮಲ್ ಡಿಜಿಟಲ್ ಇನ್ಫರ್ಮೇಷನ್ ಸಿಸ್ಟಂ ಅಡಿಯಲ್ಲಿ ಯೂನಿಕ್ ನಂಬರ್ ನೀಡುವ ಯೋಜನೆಯ ಜಾರಿಗೆ ಪಾಲಿಕೆ ಮುಂದಾಗಿದೆ.

ಜಾನುವಾರುಗಳಿಗೆ ಯೂನಿಕ್ ನಂಬರ್ ನೀಡುವ ಕಲ್ಪನೆ ಮೂಡಿದ್ದು ಬಿಡಾಡಿ ದನಗಳಿಂದಾದರೂ, ಇದೀಗ ಎಮ್ಮೆ, ಕೋಣಗಳಿಗೆ ನಂಬರ್ ನೀಡುವ ಚಿಂತನೆ ನಡೆದಿದೆ. ಕುರಿ, ಆಡು, ಸಾಕು ನಾಯಿಗಳಿಗೂ ನಂಬರ್ ನೀಡುವ ಬಗ್ಗೆ ಯೋಚಿಸಲಾಗುತ್ತಿದೆ. ಜಾನುವಾರುಗಳಿಗೆ ನೀಡುವ ಯೂನಿಕ್ ನಂಬರ್‌ನಲ್ಲಿ ಅವುಗಳ ಮುಖ, ಮೂಗು ಹಾಗೂ ಇಡೀ ದೇಹದ ಚಹರೆ ಅಳವಡಿಸಲಾಗುವುದು. ಜತೆಗೆ ದನದ ಮಾಲೀಕನ ಸಂಪೂರ್ಣ ವಿಳಾಸ ಹಾಗೂ ಮೊಬೈಲ್ ನಂಬರ್ ಸಹ ಇರಲಿದೆ.‌

ಯಾರಾದರೂ ತಮ್ಮ ದನಗಳನ್ನು ರಸ್ತೆಗೆ ಬಿಟ್ಟು, ಸಂಚಾರಕ್ಕೆ ಅಡ್ಡಿಪಡಿಸಿದರೆ ದನಗಳನ್ನು ವಾಹನಗಳಲ್ಲಿ ತೆಗೆದುಕೊಂಡು, ಶಿವಳ್ಳಿಯಲ್ಲಿ ನಿರ್ಮಿಸಿರುವ ಶೆಲ್ಡರ್‌ನಲ್ಲಿ ಬಿಡಾಡಿ ದನಗಳನ್ನು ತೆಗೆದುಕೊಂಡು ಹೋಗಿ ಬಿಡಲಾಗುತ್ತದೆ.
ದನಗಳನ್ನು ನಿಯಂತ್ರಿಸುವ ಉದ್ದೇಶದಿಂದ ಯೂನಿಕ್ ನಂಬರ್ ನೀಡುವ ಯೋಚನೆ ಆರಂಭಗೊಂಡಿದ್ದು,‌ ಇದೀಗ, ಪಾಲಿಕೆ ವ್ಯಾಪ್ತಿಯ ಎಲ್ಲ ಜಾನುವಾರು, ಕುರಿ, ಆಕಳು, ಸಾಕು ನಾಯಿಗಳಿಗೆ ಈ ನಂಬರ್ ನೀಡಲು ತೀರ್ಮಾನಿಸಲಾಗಿದೆ. ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ, ಯೋಜನೆ ಜಾರಿಗೊಳಿಸಲಾಗುವ ಮಾಹಿತಿ ಲಭ್ಯವಾಗಿದೆ.

About The Author