ಕರುನಾಡ ಜೀವನಾಡಿ ಕಾವೇರಿಯ ಪವಿತ್ರ ತೀರ್ಥೋದ್ಭವ ಕ್ಷಣಗಳು ಸಮೀಪಿಸುತ್ತಿವೆ. ತಲಕಾವೇರಿ ಉಗಮಸ್ಥಳದಲ್ಲಿ ಇಂದು ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ತೀರ್ಥೋದ್ಭವ ಜರುಗಲಿದ್ದು, ಈ ಮಹಾಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ನಡೆಯುವ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಜಿಲ್ಲಾಡಳಿತವು ಭದ್ರತೆ ಹಾಗೂ ಸೌಲಭ್ಯಗಳ ಸಕಲ ಸಿದ್ಧತೆ ಮಾಡಿಕೊಂಡಿದೆ.
ದಕ್ಷಿಣ ಭಾರತದ ಗಂಗೆ ಎಂದೇ ಪೂಜಿಸಲ್ಪಡುವ ಕಾವೇರಿ ನದಿಯ ತೀರ್ಥೋದ್ಭವದ ಹಿನ್ನೆಲೆಯಲ್ಲಿ ತಲಕಾವೇರಿ ಹಾಗೂ ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ವರ್ಷಕ್ಕೊಮ್ಮೆ ನಡೆಯುವ ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದಲೂ ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಹೆಚ್ಚಿನ ಜನಸಂದಣಿ ನಿರೀಕ್ಷೆಯ ಹಿನ್ನೆಲೆಯಲ್ಲಿ ನೂಕುನುಗ್ಗಲು ತಡೆಯಲು ಬ್ಯಾರಿಕೇಡ್‌ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಮಕರ ಲಗ್ನದಲ್ಲಿ ಮಧ್ಯಾಹ್ನ 1:44ಕ್ಕೆ ಪವಿತ್ರ ತೀರ್ಥೋದ್ಭವ ನಡೆಯಲಿದ್ದು, ಬೆಳಗ್ಗೆಯಿಂದಲೇ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿವೆ. ಅರ್ಚಕರ ತಂಡವು ಕಾವೇರಿ ಮಾತೆಯ ಸ್ವಾಗತಕ್ಕೆ ಸಜ್ಜಾಗಿದೆ. ತೀರ್ಥೋದ್ಭವದ ಪೂರ್ವಭಾವಿಯಾಗಿ ಮುಂಜಾನೆ ವಿವಿಧ ಪೂಜೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾವೇರಿ ಮಾತೆಯ ತೀರ್ಥರೂಪದ ದರ್ಶನಕ್ಕಾಗಿ ಸಹಸ್ರಾರು ಭಕ್ತರು ಆಗಮಿಸುತ್ತಿದ್ದು, ಯಾವುದೇ ರೀತಿಯ ಅಸೌಕರ್ಯ ಅಥವಾ ಅಡಚಣೆ ಉಂಟಾಗದಂತೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಕೊಡಗಿನ ಕುಲದೇವತೆಯಾದ ತಾಯಿ ಕಾವೇರಿ ತೀರ್ಥಸ್ವರೂಪಿಣಿಯಾಗಿ ನಾಡಿನ ಜನತೆಗೆ ದರ್ಶನ ನೀಡಲು ಸಜ್ಜಾಗಿದ್ದಾಳೆ. ಈ ಪವಿತ್ರ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಭಕ್ತಗಣ ಆತುರದಿಂದ ಕಾಯುತ್ತಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ