2024ರ ಜುಲೈ ತಿಂಗಳಲ್ಲಿ ನಡೆದ ವಿದ್ಯಾರ್ಥಿ ಕ್ರಾಂತಿಯ ಪ್ರಮುಖ ಮುಖಂಡ, ಇನ್‌ಕಿಲಾಬ್ ಮಂಚ್ ಪಕ್ಷದ ಸ್ಥಾಪಕ ಉಸ್ಮಾನ್ ಹದಿಯನ್ನು ಗುಂಡಿನಿಂದ ಹತ್ಯೆ ಮಾಡಲಾಗಿದ್ದು, ಈ ಹತ್ಯೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ನಂತರ ಇನ್‌ಕಿಲಾಬ್ ಮಂಚ್ ಪಕ್ಷವು ತನಿಖೆಯನ್ನು ತಕ್ಷಣವೇ ವೃತ್ತಿಪರವಾಗಿ, FBI ಅಥವಾ ಸ್ಕಾಟ್‌ಲ್ಯಾಂಡ್‌ಯಾರ್ಡ್ ಶೈಲಿಯ ಅಂತಾರಾಷ್ಟ್ರೀಯ ಏಜೆನ್ಸಿಗಳ ಸಹಾಯದಿಂದ ನಡೆಸಬೇಕೆಂದು ಆಗ್ರಹಿಸಿದೆ.
ಪಕ್ಷದ ಹೇಳಿಕೆಯಲ್ಲಿ, ಹತ್ಯೆ ಆರೋಪಿಗಳನ್ನು ತಕ್ಷಣ ಬಂಧಿಸಲು ವಿಫಲವಾದಲ್ಲಿ, ಮೋಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಕೆಳಗಿಳಿಸುವುದಾಗಿ ಎಚ್ಚರಿಸಲಾಗಿದೆ. ಜೊತೆಗೆ, ಶೀಘ್ರ ತನಿಖಾ ನ್ಯಾಯಾಧಿಕರಣ ರಚನೆ ಮಾಡಬೇಕೆಂದು ಪಾರ್ಟಿ ಒತ್ತಾಯಿಸಿದೆ.
ಆಂತರಿಕ ಸಂಘರ್ಷ ಭುಗಿಲೆದ್ದಿರುವ ಬಾಂಗ್ಲಾದೇಶದಲ್ಲಿ ಭಾರತವಿರೋಧಿ ಮನಃಸ್ಥಿತಿಗೆ ತುಪ್ಪ ಸುರಿದು, ಭಾರತವು ಬಾಂಗ್ಲಾ ಮೇಲೆ ದಾಳಿ ಮಾಡುವಂತೆ ಪ್ರಚೋದಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂಬ ಸ್ಫೋಟಕ ವಿಚಾರವನ್ನು ಭಾರತದ ಗುಪ್ತಚರಸಂಸ್ಥೆಗಳು ಬಹಿರಂಗಪಡಿಸಿವೆ. ಪಾಕ್ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಬೆಂಬಲಿತ ಶಕ್ತಿಗಳು ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಅವಾಮಿ ಲೀಗ್ ಪಕ್ಷಕ್ಕೆ ಭಾರತ ಬೆನ್ನೆಲುಬಾಗಿ ನಿಂತಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ.
ಬಾಂಗ್ಲಾ ನಾಗರಿಕರನ್ನು ಭಾರತದ ವಿರುದ್ಧ ಎತ್ತಿಕಟ್ಟಿ, ಭಾರತವು ಬಾಂಗ್ಲಾ ಮೇಲೆ ದಾಳಿ ಮಾಡುವಂತೆ ಪ್ರಚೋದಿಸುವುದು ಇವರ ಉದ್ದೇಶ. ಕಳೆದ ವರ್ಷ ಹಸೀನಾ ಭಾರತಕ್ಕೆ ಪಲಾಯನಗೈದ ದಿನಗಳಿಂದಲೇ ಐಎಸ್‌ಐ ಈ ಕೆಲಸದಲ್ಲಿ ನಿರತವಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಈ ಮೂಲಕ ಭಾರತದ ವಿರುದ್ಧ ಇತರ ದೇಶಗಳನ್ನು ಎತ್ತಿಕಟ್ಟಿ ಮೈಕಾಯಿಸಿಕೊಳ್ಳುವ ಪಾಕ್‌ನ ಚಾಳಿ ಮತ್ತೊಮ್ಮೆ ಬಹಿರಂಗವಾಗಿದೆ
ವರದಿ : ಲಾವಣ್ಯ ಅನಿಗೋಳ




