ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ತಾಂಡಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಕೌಟುಂಬಿಕ ಕಲಹದ ವಿಚಾರಣೆಗೆ ತೆರಳಿದ್ದ ASI ಹಾಗೂ PSI ಮೇಲೆಯೇ ದಂಪತಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ವಿಚಾರಣೆಗೆಂದು ತೆರಳಿದ್ದ ASI ವೆಂಕಟಪ್ಪ ನಾಯಕ್ ಮತ್ತು PSI ವೆಂಕಟೇಶ್ ಮೇಲೆ ದಂಪತಿ ಹಿಂಸಾತ್ಮಕವಾಗಿ ವರ್ತಿಸಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಈ ಘಟನೆ ನಡೆದಿದೆ. ಆರೋಪಿಗಳಾದ ರಾಮಪ್ಪ ಕೃಷ್ಣ (35) ಮತ್ತು ಪತ್ನಿ ಸಕ್ಕುಬಾಯಿ (30) ಅವರು ವಿಚಾರಣೆ ಸಮಯದಲ್ಲೇ ಏಕಾಏಕಿ ಕೋಪಗೊಂಡು ASI ಮೇಲೆ ದಾಳಿ ಮಾಡಿದ್ದಾರೆ. ಅವರು ASI ನ ಮೊಬೈಲ್ ಕಸಿದು, ಬಟ್ಟೆ ಹರಿದು, ಕಂಬಕ್ಕೆ ಕಟ್ಟಿ ಥಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಳಿಕ ಆರೋಪಿಗಳು ASI ಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆಂದು ಆರೋಪಿಸಲಾಗಿದೆ.ಈ ವೇಳೆ ಪೊಲೀಸರ ಎದುರೇ ದೂರುದಾರನ ಮಗ ರಾಘವೇಂದ್ರನನ್ನೂ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮುದಗಲ್ ಠಾಣೆಯ ಪಿಎಸ್‌ಐ ವೆಂಕಟೇಶ್ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದು, ಇಬ್ಬರು ಅಧಿಕಾರಿಗಳು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲೆಯಾಗಿದ್ದಾರೆ. ಪ್ರಕರಣದ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳಾದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

