ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಳೆದ ವರ್ಷದಿಂದ ಅಕ್ರಮ ಸೈಟ್ ಹಂಚಿಕೆ ಪ್ರಕರಣದ ಆರೋಪಗಳಿಂದ ಸುದ್ದಿಯಲ್ಲೇ ಸಿಲುಕಿಕೊಂಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆಯನ್ನು ತೀವ್ರಗೊಳಿಸಿದ್ದು, ಮುಡಾದ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡಿದೆ. ಸೆಪ್ಟೆಂಬರ್ 16 ರಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾದ ದಿನೇಶ್ ಅವರನ್ನು ವಿಚಾರಣೆ ಬಳಿಕ ಅಧಿಕಾರಿಗಳು ತಮ್ಮ ವಶದಲ್ಲೇ ಇರಿಸಿಕೊಂಡಿದ್ದಾರೆ.
ದಿನೇಶ್ ಕುಮಾರ್ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಸೈಟ್ಗಳನ್ನು ಮರುಹಂಚಿಕೆ ಮಾಡಿ ಲಾಭ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಣಕಾಸು ವ್ಯವಹಾರ ಮತ್ತು ಆಸ್ತಿ ಗಳಿಕೆ ಸಂಬಂಧ ಸಾಕ್ಷ್ಯಗಳು ಪತ್ತೆಯಾಗಿರುವುದಾಗಿ ಇಡಿ ಹೇಳಿದೆ. 2022ರಲ್ಲಿ ಮುಡಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ದಿನೇಶ್ ವಿರುದ್ಧ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆಪಾದನೆಯ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆಗೆ ನೇಮಕ ಮಾಡಿದರೂ, ಆ ಆದೇಶವನ್ನು ಭಾರಿ ಟೀಕೆಯ ಹಿನ್ನೆಲೆಯಲ್ಲಿ ಸರ್ಕಾರ ಹಿಂತೆಗೆದುಕೊಂಡಿತ್ತು.
ಈ ಪ್ರಕರಣದಲ್ಲಿ ದಿನೇಶ್ ಅವರಿಗೆ ಸೇರಿದ ಕೆಲವು ಆಸ್ತಿಗಳನ್ನು ಇಡಿ ಈಗಾಗಲೇ ಜಪ್ತಿ ಮಾಡಿದೆ. ರಾಜ್ಯ ಸರ್ಕಾರವು ದಿನೇಶ್ ವಿರುದ್ಧ ತನಿಖೆಗೆ ಹಸಿರು ನಿಶಾನೆ ನೀಡಿದರೆ, ಮುಡಾದ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ವಿರುದ್ಧ ತನಿಖೆಗೆ ಇನ್ನೂ ಅನುಮತಿ ನೀಡಿಲ್ಲ. ಇದೇ ವೇಳೆ ಪ್ರಕರಣದ ತನಿಖೆ ವಿಳಂಬವಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಆರು ತಿಂಗಳಿಂದ ಪ್ರಗತಿ ಕಾಣದಿರುವುದಾಗಿ ಎಚ್ಚರಿಸಿದೆ. ಮತ್ತೊಂದೆಡೆ, ಸ್ನೇಹಮಯಿ ಕೃಷ್ಣ ಅವರು ತನಿಖೆ ತ್ವರಿತಗೊಳಿಸಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

