CPI ಸಾಲಿಮಠ ಸಜೀವ ದಹನ: ನಿಜಕ್ಕೂ ಕಾರ್ ದುರಂತ ಆಗಿದ್ದು ಹೇಗೆ?

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಹೊರವಲಯದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದ ಲೋಕಾಯುಕ್ತ CPI PV ಸಾಲಿಮಠ (44) ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅವರು ಸಜೀವವಾಗಿ ದಹನಗೊಂಡಿದ್ದು, ಗುರುತಿಸಲಾಗದಷ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾರಿನಿಂದ ಹೊರಗಡೆ ಬರುವುದಕ್ಕಾಗದೆ ಒಳಗಡೆಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

ಕರ್ತವ್ಯ ಮುಗಿಸಿಕೊಂಡು ಪತ್ನಿ ಮತ್ತು ಮಕ್ಕಳನ್ನು ನೋಡಲು ಹೊರಟಿದ್ದ ಅವರನ್ನು ರಸ್ತೆಯಲ್ಲಿ ಜವರಾಯ ಬಲಿ ಪಡೆದುಕೊಂಡಿದ್ದ. ರಾತ್ರಿ 7.30ರ ಸುಮಾರಿನಲ್ಲಿ ನಡೆದ ಈ ಭೀಕರ ಅಪಘಾತಕ್ಕೆ ರಸ್ತೆ ಡಿವೈಡರ್‌ ಕಾರಣ ಎಂದು ಗೊತ್ತಾಗಿದೆ. ಸಾಲಿಮಠ ತಮ್ಮ ಸ್ವಂತ ಐ20 ಕಾರಿನಲ್ಲಿ ಒಬ್ಬರೇ ಇದ್ದು, ಅದನ್ನು ಡ್ರೈವ್‌ ಮಾಡುತ್ತಿದ್ದರು. ಇನ್ನು ಅರ್ಧಗಂಟೆ ಪ್ರಯಾಣ ಮಾಡಿದ್ದರೆ ಗದಗ ತಲುಪುತ್ತಿದ್ದರು. ಆದರೆ ರಾತ್ರಿ 7-30 ಸಮಯದಲ್ಲಿ ನಡೆದ ಅಪಘಾತದಲ್ಲಿ ಬಾರದ ಲೋಕಕ್ಕೆ ಹೋಗಿದ್ದಾರೆ.

ಹಾಗಾದ್ರೆ ಅಪಘಾತ ನಡೆದಿದ್ದು ಹೇಗೆ? ಅನ್ನೋದನ್ನ ನೋಡೋದಾದ್ರೆ ಹುಬ್ಬಳ್ಳಿಯಿಂದ ಗದಗಿಗೆ ಹೋಗುವಾಗ ಡಿವೈಡರ್​ಗೆ ಮೊದಲು ಕಾರು ಡಿಕ್ಕಿಯಾಗಿ, ಪಕ್ಕದಲ್ಲಿದ್ದ ರಸ್ತೆಗೆ ಜಂಪ್ ಆಗಿದೆ. ತಾವು ಹೋಗುತ್ತಿದ್ದ ಮಾರ್ಗದ ಎದುರು ಬದಿಯ ರಸ್ತೆಯನ್ನು ಇಳಿದು ಮತ್ತೆ ಮೇಲಕ್ಕೆ ಬಂದು ನಂತರ ಮತ್ತೆ ರಸ್ತೆ ಪಕ್ಕದಲ್ಲಿ ಹೋಗಿ ನಿಂತಿದೆ. ಈ ಸಮಯದಲ್ಲಿ ಪೆಟ್ರೋಲ್ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಸಜೀವವಾಗಿ ದಹನವಾಗಿದ್ದಾರೆ. ಕಾರಿನಿಂದ ಹೊರಗಡೆ ಬರುವುದಕ್ಕಾಗದೆ ಒಳಗಡೆಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

ಅಪಘಾತದ ನಂತರ ಹುಬ್ಬಳಿ ಕಿಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪೊಲೀಸ್ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಅಂತಿಮ ನಮನ ಸಲ್ಲಿಸಿದರು. ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಧಾರವಾಡ ಎಸ್ಪಿ ಗುಂಜನ್ ಆರ್ಯ ಸೇರಿದಂತೆ ಹಲವು ಅಧಿಕಾರಿಗಳು ಕುಟುಂಬಕ್ಕೆ ಸಾಂತ್ವನ ಹೇಳಿದರು.

ಪಾರ್ಥಿವ ಶರೀರವನ್ನು ಆಂಬುಲೆನ್ಸ್ ಮೂಲಕ ಹುಬ್ಬಳ್ಳಿ–ಧಾರವಾಡ ಮಾರ್ಗವಾಗಿ ಸ್ವಗ್ರಾಮ ಮುರಗೋಡಕ್ಕೆ ಕೊಂಡೊಯ್ಯಲಾಯಿತು. ಮಾರ್ಗ ಮಧ್ಯೆ ಅನೇಕ ಠಾಣೆಗಳಲ್ಲಿ ಸಿಬ್ಬಂದಿ ಗೌರವ ನಮನ ಸಲ್ಲಿಸಿದರು. ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ಅಪಘಾತಕ್ಕೆ ಸಂಬಂಧಿಸಿದಂತೆ ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author