ಇತ್ತೀಚೆಗೆ ರಾಜ್ಯದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಸುಮಾರು 5 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ. ಸರ್ಕಾರ ಶೀಘ್ರದಲ್ಲಿ ಪರಿಹಾರ ನೀಡಲು ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಕೃಷಿ ಮೇಳವನ್ನು ಉದ್ಘಾಟಿಸಿ ಸಿಎಂ ಮಾತನಾಡಿದ್ದಾರೆ.
ಈ ವರ್ಷ ಮುಂಗಾರು ಸರಾಸರಿ ಮಳೆಯೊಂದಿಗೆ ಶುಭಾರಂಭವಾದರೂ, ಕೆಲ ಭಾಗಗಳಲ್ಲಿ ಅತಿವೃಷ್ಟಿಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ರಾಜ್ಯದ ಸುಮಾರು 80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಆದರೆ ಭಾರೀ ಮಳೆಯಿಂದಾಗಿ ಅಂದಾಜು 5 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೊಳಗೊಂಡಿದೆ ಅಂತ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಹಾನಿಯಾದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆಯ ನಂತರ ತಕ್ಷಣ ಪರಿಹಾರ ನೀಡಲಾಗುವುದು. ಪ್ರಸ್ತುತ ರಾಜ್ಯದಲ್ಲಿ ಪ್ರತಿ ದಿನ 1 ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಗುಜರಾತ್ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನ ಗಳಿಸುವ ಗುರಿ ಹೊಂದಲಾಗಿದೆ ಎಂದು ಸಿಎಂ ಹೇಳಿದರು.
ಸಿರಿಧಾನ್ಯ ಬೆಳೆದು ಆರೋಗ್ಯ ವೃದ್ಧಿಸುವುದರ ಜೊತೆಗೆ ಮಾರುಕಟ್ಟೆಯಲ್ಲೂ ಉತ್ತಮ ದರ ದೊರೆಯುವ ಸಾಧ್ಯತೆ ಇದೆ. ಇದನ್ನು ಉತ್ತೇಜಿಸಲು ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ.
ರಾಜ್ಯದಲ್ಲಿ ಶೇ. 40ಕ್ಕೂ ಕಡಿಮೆ ಪ್ರದೇಶ ನೀರಾವರಿಯಡಿ ಒಳಪಟ್ಟಿದ್ದು, ಉಳಿದ ಭಾಗ ಮಳೆಯಾಶ್ರಿತವಾಗಿದೆ. ಮಳೆಯಾಶ್ರಿತ ಕೃಷಿ ಪ್ರದೇಶಗಳಲ್ಲಿ ಹೆಚ್ಚು ಪ್ರತಿಫಲ ನೀಡಬಹುದಾದ ಬೆಳೆಗಳ ಬಗ್ಗೆ ಕೃಷಿ ವಿಶ್ವವಿದ್ಯಾಲಯಗಳು ಹೆಚ್ಚಿನ ಸಂಶೋಧನೆ ನಡೆಸಿ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ವರದಿ : ಲಾವಣ್ಯ ಅನಿಗೋಳ