ತಿಪಟೂರು:ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಆರೋಪದ ಮೇರೆಗೆ, ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ನಾಲ್ವರು ಸದಸ್ಯರ ಸದಸ್ಯತ್ವವನ್ನು ಜಿಲ್ಲಾಧಿಕಾರಿ ನ್ಯಾಯಾಲಯ ಅನರ್ಹಗೊಳಿಸಿದೆ.
31ನೇ ವಾರ್ಡ್ ಬಿಜೆಪಿ ಬೆಂಬಲಿತ ಸದಸ್ಯೆ ಅಶ್ವಿನಿ ದೇವರಾಜು, 16ನೇ ವಾರ್ಡ್ ಬಿಜೆಪಿ ಬೆಂಬಲಿತ ಸದಸ್ಯೆ ಪದ್ಮಶಿವಪ್ಪ, 11ನೇ ವಾರ್ಡ್ ಜೆಡಿಎಸ್ ಬೆಂಬಲಿತ ಸದಸ್ಯ ಎಂ.ಬಿ.ಜಯರಾಂ, 24ನೇ ವಾರ್ಡ್ ಜೆಡಿಎಸ್ ಬೆಂಬಲಿತ ಸದಸ್ಯೆ ಅಸೀಪಾ ಬಾನು ಅನರ್ಹಗೊಂಡ ಸದಸ್ಯರು.
2024ರ ಆಗಸ್ಟ್ನಲ್ಲಿ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಯಮುನಾ ಎ.ಎಸ್. ಅಧ್ಯಕ್ಷರಾಗಿ ಮತ್ತು ಮೇಘಶ್ರೀ ಭೂಷಣ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬಿಜೆಪಿ–ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳಾದ ಲತಾ ಲೋಕೇಶ್ (ಅಧ್ಯಕ್ಷ) ಮತ್ತು ಸಂಗಮೇಶ್ (ಉಪಾಧ್ಯಕ್ಷ) ಎದುರಾಳಿಗಳಾಗಿದ್ದರು.
33 ಸದಸ್ಯರ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 18 ಮತಗಳು, ಉಪಾಧ್ಯಕ್ಷ ಸ್ಥಾನಕ್ಕೆ 15 ಮತಗಳು ಚಲಾವಣೆಗೊಂಡಿದ್ದವು. ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಜೆಡಿಎಸ್ ಹೊರಡಿಸಿದ್ದ ವಿಪ್ ಉಲ್ಲಂಘಿಸಿ ನಾಲ್ವರು ಸದಸ್ಯರು ಅಡ್ಡಮತದಾನ ಮಾಡಿದ್ದರು. ಇದರಿಂದ ಬೇಸತ್ತ ಲತಾ ಮತ್ತು ಸಂಗಮೇಶ್ ಅವರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




