ಒಂದೇ- ಕ್ಲಿಕ್‌ʼ ಹೊಸ ತಂತ್ರ! ಪೆನ್ಷನ್ ಕಾರ್ಡ್ ಹೆಸರಲ್ಲಿ 2 ಲಕ್ಷ ರೂ. ಗುಳುಂ?

ಹುಬ್ಬಳ್ಳಿಯಲ್ಲಿ ಮತ್ತೊಂದು ಸೈಬರ್ ವಂಚನೆ ಪ್ರಕರಣ ದಾಖಲಾಗಿದೆ. ಫೇಸ್‌ಬುಕ್‌ನಲ್ಲಿ ಬಂದ ಒಂದು ಲಿಂಕ್ ಒತ್ತಿದ ಕಾರಣಕ್ಕೆ ನಿವೃತ್ತ ನೌಕರೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಎಸ್‌ಬಿಐ ಪೆನ್ಷನ್ ಕಾರ್ಡ್ ಹೆಸರಿನಲ್ಲಿ ನಡೆದ ಈ ಮೋಸ, ಜನರಲ್ಲಿ ಆತಂಕ ಮೂಡಿಸಿದೆ. ಒಂದು ಸಣ್ಣ ಕ್ಲಿಕ್ ದೊಡ್ಡ ನಷ್ಟಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ ನಗರದ ಮೋಹನ್ ಜೆ ಎಂಬ ನಿವೃತ್ತ ನೌಕರ, ಫೇಸ್‌ಬುಕ್ ಪೇಜ್ ನೋಡುತ್ತಿದ್ದಾಗ “ಎಸ್‌ಬಿಐ ಪೆನ್ಷನ್ ಕಾರ್ಡ್” ಪಡೆಯುವ ಲಿಂಕ್ ಒತ್ತಿದ್ದಾರೆ. ಆದರೆ ಅದೇ ಲಿಂಕ್ ಸೈಬರ್ ಮೋಸಗಾರರ ಬಲೆಯಾಗಿ ಪರಿಣಮಿಸಿದೆ. ಲಿಂಕ್ ಕ್ಲಿಕ್ ಮಾಡಿದ ಕೆಲವೇ ಕ್ಷಣಗಳಲ್ಲಿ, ಅವರ ಮೊಬೈಲ್ ಮೂಲಕ ಬ್ಯಾಂಕ್ ಖಾತೆಯ ಮಾಹಿತಿ ದುರುಪಯೋಗ ಮಾಡಿಕೊಂಡ ಆರೋಪಿಗಳು, ಒಟ್ಟು 2 ಲಕ್ಷ 1 ಸಾವಿರ ರೂಪಾಯಿಯನ್ನು ವರ್ಗಾಯಿಸಿಕೊಂಡಿದ್ದಾರೆ. ಸೈಬರ್ ಅಪರಾಧಿಗಳು ನಕಲಿ ಲಿಂಕ್‌ಗಳನ್ನು ಬಳಸಿ, ಬ್ಯಾಂಕ್ ಅಥವಾ ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಮೋಸಗೊಳಿಸುತ್ತಿದ್ದಾರೆ. “ಒಂದು ಕ್ಲಿಕ್ – ಖಾತೆ ಖಾಲಿ” ಎಂಬ ರೀತಿಯಲ್ಲಿ ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಪೊಲೀಸರು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ, ಬ್ಯಾಂಕ್ ವಿವರಗಳು, OTP, ಪಾಸ್‌ವರ್ಡ್ ಹಂಚಿಕೊಳ್ಳಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಫೇಸ್‌ಬುಕ್ ಅಥವಾ ವಾಟ್ಸಪ್ ಲಿಂಕ್‌ಗಳನ್ನು ಪರಿಶೀಲಿಸದೇ ಕ್ಲಿಕ್ ಮಾಡಬೇಡಿ. “ಬ್ಯಾಂಕ್ ಆಫರ್” ಅಥವಾ “ಕಾರ್ಡ್ ಅಪ್ಡೇಟ್” ಹೆಸರಿನ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ. ಅನುಮಾನಾಸ್ಪದ ಲಿಂಕ್ ಕಂಡರೆ ತಕ್ಷಣ ಡಿಲೀಟ್ ಮಾಡಿ.

ಒಟ್ಟಾರೆ, ತಂತ್ರಜ್ಞಾನ ಸೌಲಭ್ಯಗಳ ಜೊತೆಗೆ ಸೈಬರ್ ಅಪಾಯಗಳೂ ಹೆಚ್ಚುತ್ತಿವೆ. ಹೀಗಾಗಿ ಒಂದು ಕ್ಲಿಕ್ ಮಾಡುವ ಮೊದಲು ಜಾಗರೂಕತೆ ಅಗತ್ಯ ಎನ್ನುವುದು ಈ ಘಟನೆ ಮತ್ತೆ ನೆನಪಿಸಿದೆ.

About The Author