ತಮಿಳುನಾಡಿನಲ್ಲಿ ದಿತ್ವಾ ಚಂಡಮಾರುತ ಆರ್ಭಟಕ್ಕೆ 3 ಜನ ಬಲಿಯಾಗಿದ್ದಾರೆ. ಹೌದು ಶ್ರೀಲಂಕಾದಲ್ಲಿ ಭಾರೀ ವಿನಾಶ ಸೃಷ್ಟಿಸಿದ ದಿತ್ವಾ ಚಂಡಮಾರುತ ತಮಿಳುನಾಡಿನಲ್ಲಿ ಸಹ ಅಬ್ಬರಿಸಿದ್ದು, ಮೂರು ಜನರ ಸಾವಿಗೆ ಮತ್ತು ಅಪಾರ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿದೆ.
ಚಂಡಮಾರುತದ ತೀವ್ರತೆಯನ್ನು ಗಮನಿಸಿ ಭಾರತೀಯ ಹವಾಮಾನ ಇಲಾಖೆ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಆಂಧ್ರಪ್ರದೇಶಕ್ಕೂ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
ತಮಿಳುನಾಡಿನ ತೂತುಕುಡಿ ಮತ್ತು ತಂಜಾವೂರು ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಮೈಲಾಡುತುರೈ ಜಿಲ್ಲೆಯಲ್ಲೊಬ್ಬ 20 ವರ್ಷದ ಯುವಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾನೆ. ರಾಜ್ಯದ ತುರ್ತು ನಿರ್ವಹಣಾ ಸಚಿವ K.K.S.S.R ರಾಮಚಂದ್ರನ್ ಹೇಳಿದ್ದಾರೆ.
234 ಮಣ್ಣಿನ ಮನೆಗಳು ಮತ್ತು ಗುಡಿಸಲುಗಳು ಹಾನಿಗೊಳಗಾಗಿವೆ. 149 ಜಾನುವಾರುಗಳು ಸತ್ತು ಹೋಗಿವೆ. 57,000 ಹೆಕ್ಟೇರ್ ಕೃಷಿಭೂಮಿ ಜಲಾವೃತವಾಗಿದೆ. ಹೆಚ್ಚುವರಿಯಾಗಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಬೆಂಬಲಿಸಲು ಮಹಾರಾಷ್ಟ್ರ ಮತ್ತು ಗುಜರಾತ್ ನಿಂದ ಇನ್ನೂ 10 NDRF ತಂಡಗಳು ಚೆನ್ನೈಗೆ ಆಗಮಿಸಿವೆ.
ಭಾರೀ ಮಳೆಯಿಂದಾಗಿ ವಿಮಾನ ಹಾರಾಟದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಶನಿವಾರ ಚೆನ್ನೈನಲ್ಲಿ 54 ವಿಮಾನ ಹಾರಾಟ ರದ್ದಾದ ಬಗ್ಗೆ ವರದಿಯಾಗಿದೆ. ಚಂಡಮಾರುತದಿಂದಾಗಿ ಪುದುಚೇರಿ ಕೇಂದ್ರೀಯ ವಿಶ್ವವಿದ್ಯಾಲಯವು ಪರೀಕ್ಷೆಗಳನ್ನು ಮುಂದೂಡಿದೆ ಮತ್ತು ರಜೆ ಘೋಷಿಸಿದೆ.
ವರದಿ : ಲಾವಣ್ಯ ಅನಿಗೋಳ

