ಬಂಗಾಳ ಕೊಲ್ಲಿಯಲ್ಲಿ ಮೊಂಥಾ ಚಂಡಮಾರುತ ತೀವ್ರಗೊಂಡಿದ್ದು, ಆಂಧ್ರಪ್ರದೇಶದ ಕರಾವಳಿಯತ್ತ ರಣವೇಗದಲ್ಲಿ ಮುನ್ನುಗ್ಗುತ್ತಿದೆ. ಇಂದು ಸಂಜೆಯಿಂದಲೇ ಕರಾವಳಿ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಶುರುವಾಗಲಿದೆ. ಇದರಿಂದ ವಿದ್ಯುತ್ ಮಾರ್ಗಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ.
ರೈಲ್ವೆ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಅಕ್ಟೋಬರ್ 28 ಮತ್ತು 29ರಂದು, ಆಂಧ್ರದಾದ್ಯಂತ 70ಕ್ಕೂ ಹೆಚ್ಚು ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಸೇವೆ ಸ್ಥಗಿತಗೊಳಿಸಿದೆ.
ವಿಜಯವಾಡ, ರಾಜಮಂಡ್ರಿ, ಕಾಕಿನಾಡ, ವಿಶಾಖಪಟ್ಟಣ ಮತ್ತು ಭೀಮಾವರಂ ಮಾರ್ಗದಲ್ಲಿ ಸಂಚರಿಸುವ ಪ್ರಮುಖ ರೈಲುಗಳ ಸೇವೆ ಇರೋದಿಲ್ಲ. ಹವಾಮಾನ ಪರಿಸ್ಥಿತಿ ಸುಧಾರಿಸಿದ ನಂತರ ಸುರಕ್ಷತಾ ಪರಿಶೀಲನೆ ನಡೆಸಿ, ರೈಲು ಸೇವೆಗಳನ್ನು ಪುನಾರಂಭ ಮಾಡಲಾಗುತ್ತದೆ. ಪೂರ್ವ ಕರಾವಳಿ ರೈಲ್ವೆ ಕೂಡ, ಒಡಿಶಾ-ಆಂಧ್ರ ಕಾರಿಡಾರ್‌ನಲ್ಲಿ ಹಲವಾರು ಸೇವೆಗಳನ್ನು ರದ್ದುಪಡಿಸಿದೆ.
ಪ್ರತಿಕೂಲ ಹವಾಮಾನದಿಂದಾಗಿ ವಿಶಾಖಪಟ್ಟಣ ವಿಮಾನ ನಿಲ್ದಾಣದಿಂದ, ಅಕ್ಟೋಬರ್ 28ರಂದು ಎಲ್ಲಾ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆ ರದ್ದುಪಡಿಸಲಾಗಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನ, ತಮ್ಮ ವಿಮಾನದ ಸ್ಥಿತಿಗತಿ ಪರಿಶೀಲಿಸುವಂತೆ ವಿಮಾನಸಂಸ್ಥೆಗಳು ಮನವಿ ಮಾಡಿಕೊಂಡಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಕ್ಟೋಬರ್ 28ರಂದು ವಿಜಯವಾಡ ವಿಮಾನ ನಿಲ್ದಾಣದಿಂದ ನಿಗದಿಯಾಗಿದ್ದ, ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಅವುಗಳಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳು ಸೇರಿವೆ.
ವಿಭಾಗೀಯ ಮತ್ತು ಪ್ರಧಾನ ಕಚೇರಿ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ರೈಲು ಕಾರ್ಯಾಚರಣೆಗಳು, ಸೇತುವೆ ಸುರಕ್ಷತೆ ಮತ್ತು ದುರ್ಬಲ ಸ್ಥಳಗಳಲ್ಲಿ ನೀರಿನ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಕಾರ್ಯ ಆರಂಭಿಸಲಾಗಿದೆ. ಇದಕ್ಕಾಗಿಯೇ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು, ಅಧಿಕಾರಿಗಳು ಮತ್ತು ಮೇಲ್ವಿಚಾರಕರು, ಸಿಬ್ಬಂದಿ, ಗಸ್ತು ತಂಡವನ್ನು ನೇಮಿಸಲಾಗಿದೆ. ಜೊತೆಗೆ ಡೀಸೆಲ್ ಲೋಕೋಮೋಟಿವ್‌ಗಳು ಮತ್ತು ಮೊಬೈಲ್ ರಕ್ಷಣಾ ತಂಡಗಳನ್ನೂ ನಿಯೋಜಿಸಲಾಗಿದೆ.

