ಮೊಂಥಾ ಚಂಡಮಾರುತ ಆಂಧ್ರಪ್ರದೇಶದ ಕಾಕಿನಾಡ ಕರಾವಳಿಯತ್ತ ಮುನ್ನುಗ್ಗುತ್ತಿದ್ದು, ಇಂದು ಸಂಜೆ ಅಥವಾ ರಾತ್ರಿ ಅಪ್ಪಳಿಸುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ರಣ ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಿದೆ.
ಮೊಂಥಾ ಚಂಡಮಾರುತವು ಕರಾವಳಿಯತ್ತ ಸಮೀಪಿಸುತ್ತಿದ್ದಂತೆ, ಆಂಧ್ರಪ್ರದೇಶದ ಹಲವು ಭಾಗಗಳು ಮತ್ತು ದಕ್ಷಿಣ ಒಡಿಶಾದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಭಾರೀ ಮಳೆ ಆರಂಭವಾಗಿದೆ. ಸೋಮವಾರ ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ಮೋಂಥಾ ಚಂಡಮಾರುತವು, ಇದೀಗ ಭಯಂಕರ ಸ್ವರೂಪ ಪಡೆದಿದೆ. ಹೀಗಾಗಿ ಆಂಧ್ರಪ್ರದೇಶ ಮತ್ತು ಒಡಿಶಾ ಸರ್ಕಾರಗಳು ಹೈ ಅಲರ್ಟ್ ಘೋಷಿಸಿವೆ. ಕರಾವಳಿ ತಗ್ಗು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಚಂಡಮಾರುತವು ವಾಯುವ್ಯ ದಿಕ್ಕಿನಲ್ಲಿ ಚಲಿಸುವುದನ್ನು ಮುಂದುವರಿಸಿದ್ದು, ಅಕ್ಟೋಬರ್ 28ರ ರಾತ್ರಿ ಆಂಧ್ರಪ್ರದೇಶದ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ, ಕಾಕಿನಾಡದ ಸಮೀಪ ಭೂಸ್ಪರ್ಶ ಮಾಡುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಗಂಟೆಗೆ 90ರಿಂದ 100 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಕೆಲವೊಮ್ಮೆ ಇದರ ವೇಗ 110 ಕಿಲೋ ಮೀಟರ್ ತಲುಪುವ ನಿರೀಕ್ಷೆಯಿದೆ.
ಆಂಧ್ರಪ್ರದೇಶದ 19 ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ನಂದ್ಯಾಲ್, ಕಡಪ ಮತ್ತು ಅನ್ನಮಯ್ಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ, ಆರೆಂಜ್ ಅಲರ್ಟ್ ನೀಡಲಾಗಿದೆ. ಕರ್ನೂಲ್, ಅನಂತಪುರ, ಶ್ರೀ ಸತ್ಯಸಾಯಿ ಮತ್ತು ಚಿತ್ತೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಹವಾಮಾನ ವೈಪರಿತ್ಯದಿಂದಾಗಿ ಮಂಗಳವಾರ ಬೆಳಗ್ಗೆ ಚೆನ್ನೈ ಮತ್ತು ವಿಶಾಖಪಟ್ಟಣಂ ಸೇರಿದಂತೆ, ವಿವಿಧ ಸ್ಥಳಗಳ ನಡುವಿನ ಒಂಬತ್ತು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಆಂಧ್ರಪ್ರದೇಶ ಸರ್ಕಾರವು 11 ಎನ್‌ಡಿಆರ್‌ಎಫ್ ಮತ್ತು 12 ಎಸ್‌ಡಿಆರ್‌ಎಫ್ ತಂಡಗಳು, ಅಗ್ನಿಶಾಮಕ ದಳ, ಈಜುಗಾರರು, ದೋಣಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸನ್ನದ್ಧಗೊಳಿಸಲಾಗಿದೆ.
ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ವಿಜಯವಾಡದಲ್ಲೂ ಭಾರಿ ಮಳೆಯಾಗಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ ಚೆಂಗಲ್ಪಟ್ಟು, ಕಾಂಚೀಪುರಂ, ತಿರುನಲ್ವೇಲಿ ಮತ್ತು ವಿರುದುನಗರದಲ್ಲೂ ಮಳೆಯಾಗಿದೆ.

