ತುಂಬಿದ ಸದನದಲ್ಲಿ RSS ಗೀತೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಹಾಡಿದ್ರು. ಇದಾದ ಬಳಿಕ, ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಅತಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಪಕ್ಕಾ ಕಾಂಗ್ರೆಸ್‌ವಾದಿಗಳು, ಇದನ್ನ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಖರ್ಗೆ, ಸಿದ್ದರಾಮಯ್ಯರಂತ ಹಿರಿಯ ರಾಜಕಾರಣಿಗಳು ಕೂಡ, ಆರ್‌ಎಸ್‌ಎಸ್‌ಗೆ ತದ್ವಿರುದ್ಧ.
ಹೀಗಿರುವಾಗ, ಸೋನಿಯಾ ಗಾಂಧಿ ನನ್ನ ತಾಯಿ ಇದ್ದಂತೆ ಎಂದಿದ್ದ ಬಾಯಲ್ಲೇ, ಆರ್‌ಎಸ್‌ಎಸ್ ಗೀತೆಯನ್ನು ಡಿಕೆಶಿ ಹಾಡಿದ್ದಾರೆ. ಇದು ಕಾಂಗ್ರೆಸ್‌ನಲ್ಲಿ ಬಿರುಕು ಮೂಡಲು ಕಾರಣವಾಗಿದೆ. ನೇರವಾಗಿ ಅಲ್ಲದಿದ್ರೂ ಪರೋಕ್ಷವಾಗಿ ಇತರೆ ಕಾಂಗ್ರೆಸ್ ನಾಯಕರು, ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
RSS ಗೀತೆ ಹಾಡಿದ್ರೆ ಮುಖ್ಯಮಂತ್ರಿ ಸ್ಥಾನ ಸಿಗುವುದಾದ್ರೆ, ನಾವೂ ಹಾಡುತ್ತೇವೆ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ರು. ಇದೀಗ ಪ್ರಿಯಾಂಕ್ ಖರ್ಗೆ ಸರದಿ. ಟ್ವೀಟ್ ಮೂಲಕವೇ ಆರ್‌ಎಸ್‌ಎಸ್ ವಿರುದ್ಧ ಗುಡುಗಿದ್ದು, ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.
ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬೇಕೆಂದ್ರೆ, RSSಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು. ಹೀಗಂತ ಪ್ರತಿಯೊಬ್ಬ ಭಾರತದ ಪ್ರಜೆಯೂ ಪ್ರತಿಜ್ಞೆ ಕೈಗೊಳ್ಳಬೇಕು ಎಂದು, ಸಚಿವ ಪ್ರಿಯಾಂಕ್ ಖರ್ಗೆಯವರು ಕರೆ ಕೊಟ್ಟಿದ್ದಾರೆ.
ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿವಾದ, ಮನುವಾದಗಳನ್ನೇ ನರ ನಾಡಿ, ರಕ್ತಗಳಲ್ಲಿ ಪ್ರವಾಹಿಸಿಕೊಂಡಿರುವ RSS ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಶತ್ರುವಾಗಿಯೇ ನೋಡುತ್ತದೆ ಅಂತಾ ಬರೆದುಕೊಂಡಿದ್ದಾರೆ.
RSS ಸಂವಿಧಾನಕ್ಕೆ ಶತ್ರು, ಐಕ್ಯತೆಗೆ ಶತ್ರು, ರಾಷ್ಟ್ರಧ್ವಜಕ್ಕೆ ಶತ್ರು, ರಾಷ್ಟ್ರಗೀತೆಗೆ ಶತ್ರು, ಏಕತೆಗೆ ಮತ್ತು ಸಾರ್ವಭೌಮತೆಗೆ ಶತ್ರುವಾಗಿದೆ. ಬಾಬಾ ಸಾಹೇಬರು, ಸರ್ದಾರ್ ಪಟೇಲರು ದಶಕಗಳ ಹಿಂದೆಯೇ RSS ಕುರಿತು ನಿಷ್ಠುರವಾಗಿ ಎಚ್ಚರಿಕೆಯ ಸಂದೇಶ ನೀಡಿ ಹೋಗಿದ್ದಾರೆ. ಆ ಮಹನೀಯರ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಮನುವಾದಿಗಳನ್ನು ದೂರ ಇಡಬೇಕಿದೆ.
ಬ್ರಿಟಿಷರೊಂದಿಗೆ ಕೈಜೋಡಿಸಿ ಭಾರತ ವಿರೋಧಿಯಾಗಿ ನಡೆದುಕೊಂಡಿದ್ದ ಆ ಸ್ವತಂತ್ರಾ ನಂತರ ಐಕ್ಯತೆಯ ವಿರೋಧಿ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸಿತು. ಸಂಘ ಪರಿವಾರದ ಅಪಾಯವನ್ನು ಅಂದೇ ಊಹಿಸಿದ ಸರ್ದಾರ್ ಪಟೇಲರು ನಿಷೇಧ ಹೇರಿದ್ದರು.
ಈ ನೂರು ವರ್ಷಗಳಲ್ಲಿ, RSS ಈ ದೇಶಕ್ಕೆ ನೀಡಿದ ಕೇವಲ 10 ಕೊಡುಗೆಗಳನ್ನು ಹೇಳಲು ಬಿಜೆಪಿಗರಿಂದ ಮತ್ತು ಸಂಘಪರಿವಾರದವರಿಂದ ಸಾಧ್ಯವಾಗುವುದಿಲ್ಲ. ಇಂತಹ RSSನಿಂದ ಅಪಾಯವಿದೆಯೇ ಹೊರತು ಸಹಾಯವಿಲ್ಲ.
ಸಂವಿಧಾನವನ್ನು ಒಪ್ಪದೆ ಕರಡು ಪ್ರತಿಯನ್ನು ಸುಟ್ಟು ಹಾಕಿದ್ದ, ರಾಷ್ಟ್ರಧ್ವಜವನ್ನು ಗೌರವಿಸದ, ಮಹಿಳೆಯರು, ಶೋಷಿತರನ್ನು 3ನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುವ, ಅಜೆಂಡಾ ಹೊಂದಿರುವ RSS, ಕಾಂಗ್ರೆಸ್ಸಿಗೆ ಮಾತ್ರವಲ್ಲ ಈ ದೇಶದ ಐಕ್ಯತೆಗೆ ಪರಮ ಶತ್ರು, ಎನ್ನುವುದನ್ನು ಪ್ರತಿ ದೇಶಭಕ್ತನೂ ಗಮನದಲ್ಲಿರಿಸಿಕೊಳ್ಳಬೇಕು ಅಂತಾ, ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ