ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮೂರು ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿವೆ. ಅದರಲ್ಲೂ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ಗೆ ಸೋಲಾಗಿತ್ತು. ಆ ಸೋಲಿನ ರುಚಿ ಮರೆಯಲು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನ ಬಾವುಟ ಹಾರಿಸಲು ಡಿಸಿಎಂ ಡಿಕೆ ಶಿವಕುಮಾರ್ ಅಖಾಡಕ್ಕೆ ಇಳಿಯುವ ಲೆಕ್ಕಾಚಾರದಲ್ಲಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಒಲವನ್ನು ಕೂಡ ಡಿಸಿಎಂ ಡಿಕೆ ಶಿವಕುಮಾರ್ ವ್ಯಕ್ತಪಡಿಸಿ ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ಕ್ಷೇತ್ರದ ದೇವಸ್ಥಾನಗಳಿಗೆ ಭೇಟಿ ನೀಡಿರುವ ಅವ್ರು ಪಕ್ಷ ಹೇಳಿದ್ರೆ ಸ್ಪರ್ಧಿಸೋದಾಗಿ ಹೇಳಿದ್ದಾರೆ.. ಅಷ್ಟೇ ಅಲ್ಲದೇ ಚನ್ನಪಟ್ಟಣವನ್ನು ಚಿನ್ನದ ನಾಡು ಮಾಡ್ತಿನಿ ಅಂದಿದ್ದಾರೆ..
ಇನ್ನೊಂದ್ಕಡೆ ಈ ಬಗ್ಗೆ ಮಾತನಾಡಿರುವ ಬಿಜೆಪಿಯ ಸಿ.ಪಿ. ಯೋಗೆಶ್ವರ್ ಡಿಕೆಶಿ ಸ್ಪರ್ಧೆಯನ್ನು ಸ್ವಾಗತಿಸುವೆ. ಆದರೆ, ಸ್ಪರ್ಧೆಯು ಆರೋಗ್ಯಕರವಾಗಿರಬೇಕು. ಡಿಸಿಎಂ ಕ್ಷೇತ್ರ ಭೇಟಿ ಮತ್ತು ನಡವಳಿಕೆ ಗಮನಿಸಿದರೆ ಚುನಾವಣೆ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯುವ ಬಗ್ಗೆ ಅನುಮಾನವಿದೆ. ಹಾಗಾಗಿ, ಚುನಾವಣಾ ಅಕ್ರಮಕ್ಕೆ ಅವಕಾಶವಿಲ್ಲದಂತೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಮೈತ್ರಿ ನಾಯಕರು ಚುನಾವಣಾ ಆಯೋಗಕ್ಕೆ ಸದ್ಯದಲ್ಲೇ ಮನವಿ ಸಲ್ಲಿಸುತ್ತೇವೆ ಎಂದರು.
ಚನ್ನಪಟ್ಟಣದಲ್ಲಿ ಗೆದ್ದು ಮುಖ್ಯಮಂತ್ರಿಯಾಗುವ ಕನಸು ಕಂಡಿರುವ ಶಿವಕುಮಾರ್, ಇಲ್ಲಿಂದ ರಾಜಕೀಯದ ಹೊಸ ಅಧ್ಯಾಯ ಶುರುವಾಗಲಿದೆ ಎಂದು ಹೇಳಿದ್ದಾರೆ. ಆದರೆ, ಕ್ಷೇತ್ರವು ಮೈತ್ರಿ ಪಕ್ಷಗಳ ನೆಲೆಯಾಗಿರುವುದರಿಂದ ಇದೇ ಚುನಾವಣೆ ಡಿಕೆಶಿ ರಾಜಕೀಯದ ಕೊನೆಯ ಅಧ್ಯಾಯವಾಗಲಿದೆ. ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂಬ ಅವರ ಬೆಂಬಲಿಗರ ಘೋಷಣೆಗಳೇ ಅವರಿಗೆ ಮುಳುವಾಗಲಿವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇನ್ನೂ ಈ ಬಗ್ಗೆ ಮಾತನಾಡಿರುವ ವಿಜಯೇಂದ್ರ, ಡಿ.ಕೆ.ಶಿವಕುಮಾರ್ ಈಗಾಗಲೇ ಶಾಸಕರಿದ್ದಾರೆ. ಆದರೂ ಚನ್ನಪಟ್ಟಣದಲ್ಲಿ ಸ್ಪರ್ಧೆಯ ಅಭಿಲಾಷೆ ವ್ಯಕ್ತಪಡಿಸಿದ್ದಾರೆ ಇದು ಅವರ ಪಕ್ಷದ ತೀರ್ಮಾನ, ಆದರೂ ಜನರ ಮನದಾಳದಲ್ಲಿ ಏನಿದೆ ಎಂಬುದು ಇನ್ನೂ ನಿಗೂಢವಾಗಿದೆ ಎಂದು ಬೆಂಗಳೂರಿನಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸುವವರೇ ಇಲ್ಲ ಅಂತ ಅವರು ಅಂದುಕೊಂಡಿದ್ದರು. ಆದರೆ, ಜನರ ತೀರ್ಪು ಏನಿತ್ತು ಅಂತ ಎಲ್ಲರೂ ನೋಡಿದ್ದೀರಾ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಯಾರಾಗಬೇಕು ಅಂತ ನಾವು ಮತ್ತು ಜೆಡಿಎಸ್ ನಾಯಕರು ಶೀಘ್ರದಲ್ಲೇ ತೀರ್ಮಾನ ಮಾಡುತ್ತೇವೆ ಎಂದರು.
ಅಷ್ಟೇ ಅಲ್ಲದೇ ಈ ಬಗ್ಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಡಿಸಿಎಂ ಒಂದೂವರೆ ವರ್ಷದಿಂದ ಚನ್ನಪಟ್ಟಣಕ್ಕೆ ಹೋಗಿರಲಿಲ್ಲ. ಈಗ ಚನ್ನಪಟ್ಟಣದ ಬಗ್ಗೆ ಮಮತೆ ಬಂದಿದೆ ಎಂದು ವ್ಯಂಗ್ಯವಾಡಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ದೆಹಲಿಯಲ್ಲಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಇಲ್ಲಿಯವರೆಗೆ ಚನ್ನಪಟ್ಟಣ ಅಭಿವೃದ್ಧಿ ಮಾಡಬೇಡಿ ಎಂದು ಡಿಕೆ ಶಿವಕುಮಾರ್ರನ್ನು ತಡೆದಿದ್ದು ಯಾರು? ಸಂಸದರಾಗಿ ಡಿಕೆ ಶಿವಕುಮಾರ್ ಸಹೋದರನ ಕೊಡುಗೆ ಏನು? ಅವರು ಯಾರು ಬೇಕಾದರೂ ಅಭ್ಯರ್ಥಿಯಾಗಬಹುದು ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಅಭ್ಯರ್ಥಿ ಆಗಬಹುದು. ನಮ್ಮ ಕಡೆಯಿಂದ ಅಭ್ಯರ್ಥಿ ಯಾರು ಎಂದು ಕಾಲ ನಿರ್ಧರಿಸುತ್ತದೆ ಎಂದರು.
ಒಟ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಕ್ರಿಯರಾದ ಬೆನ್ನಲ್ಲೇ ಬಿಜೆಪಿ ಹಾಗೂ ಜೆಡಿಎಸ್ ಪಾಳಯದಲ್ಲಿ ಚನ್ನಪಟ್ಟಣ ಉಪಚುನಾವಣೆಯ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಸದ್ಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿದ್ದು ನಿಖಿಲ್ ಕುಮಾರಸ್ವಾಮಿಯನ್ನು ಸ್ಪರ್ಧೆ ಮಾಡುವಂತೆ ಕೇಂದ್ರ ಸಚಿವ ಕುಮಾರಸ್ವಾಮಿಗೆ ಒತ್ತಡ ಜೋರಾಗಿದೆ.
ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಗೂ ಮುನ್ನ ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಕಣಕ್ಕಿಳಿಯುತ್ತಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಡಿಕೆ ಸಹೋದರರ ಎದುರು ಮೈತ್ರಿ ಅಭ್ಯರ್ಥಿಯನ್ನು ಕಣಕಳಿಸಬೇಕಾದ ಅನಿವಾರ್ಯತೆ ಬಿಜೆಪಿ ಜೆಡಿಎಸ್ಗೆ ಬಂದಿದೆ. ಒಂದು ಕಡೆ ಜೆಡಿಎಸ್ ಕ್ಷೇತ್ರವನ್ನು ಬಿಡಬಾರದು ಎಂಬ ಲೆಕ್ಕಾಚಾರದಲ್ಲಿ ಕಾರ್ಯಕರ್ತರಿಗೆ ಮಣೆ ಹಾಕಲು ಯೋಚನೆ ಮಾಡಿದರೆ, ಮಾಜಿ ಸಚಿವ ಸಿಪಿ ಯೋಗೇಶ್ವರ್ ಬಿಜೆಪಿಯಿಂದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆಗಳು ಕೂಡ ಬಿಜೆಪಿ ಪಾಳೆಯದಲ್ಲಿ ಶುರುವಾಗಿದೆ. ಅಲ್ಲದೆ ಸಿಪಿ ಯೋಗೇಶ್ವರ್ಗೆ ಅವರಿಗೆ ಸೋಲಿನ ಅನುಕಂಪ ಕೂಡ ಇದ್ದು ಡಿಕೆ ಬ್ರದರ್ಸ್ ಸೋಲಿಸಲು ಸೂಕ್ತ ಅಭ್ಯರ್ಥಿ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಒಟ್ಟಿನಲ್ಲಿ, ಬೆಂಗಳೂರು ಗ್ರಾಮಾಂತರದಲ್ಲಿ ಸೋತಿರುವ ಡಿಕೆ ಬ್ರದರ್ಸ್ ಚನ್ನಪಟ್ಟಣದಲ್ಲಿ ಗೆಲ್ಲುವ ಮೂಲಕ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದರೆ, ಡಿಕೆ ಸಹೋದರರಿಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸಲು ಕಮಲದಳ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ.