ಬೆಂಗಳೂರು : ಇತ್ತೀಚೆಗೆ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಭಾರೀ ಚರ್ಚೆ ಆಗುತ್ತಿದೆ. ನಂದಿ ಬೆಟ್ಟದ ಕ್ಯಾಬಿನೆಟ್ ಸಭೆಗೂ ಮುನ್ನ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ 5 ವರ್ಷಗಳ ಕಾಲ ನಾನೇ ಸಿಎಂ ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಯಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಐ ಹ್ಯಾವ್ ನೋ ಅದರ್ ಆಪ್ಷನ್ ಎನ್ನುವ ಮೂಲಕ ಪರೋಕ್ಷವಾಗಿ ತಮ್ಮ ಆಸೆಯನ್ನ ಕೈ ಚೆಲ್ಲಿದಂತೆ ನುಡಿದಿದ್ದರು. ಆದರೆ ಈ ಇಬ್ಬರೂ ನಾಯಕರ ಹೇಳಿಕೆಗಳ ನಡುವೆಯೇ ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ನೀಡಿರುವ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ.
ಈ ಕುರಿತು ಮಾತನಾಡಿರುವ ಡಿ.ಕೆ ಸುರೇಶ್, ನಮ್ಮ ಅಣ್ಣ ಸಿಎಂ ಆಗಬೇಕೆಂಬ ಆಸೆ ಇದೆ. ಇಂದೂ ಇರುತ್ತೆ ನಾಳೆಯು ಇದ್ದೇ ಇರುತ್ತದೆ. ಆದರೆ ಸದ್ಯ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಏನು ಮಾಡೋದು? ನನಗೂ ನಮ್ಮಣ್ಣನ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕೆಂಬ ಬಯಕೆ ಇದೆ. ಆದರೆ ಸಿಎಂ ಬದಲಾವಣೆಯ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದು ಹೇಳಿದ್ದಾರೆ.
ಪಕ್ಷವನ್ನು ಬಲ ಪಡಿಸಲು ನಾವೆಲ್ಲ ಬದ್ಧರಾಗಿರಬೇಕು. ಈ ಅವಧಿಯಲ್ಲೇ ಸಿಎಂ ಆಗ್ತಾರಾ ಅನ್ನೋದನ್ನ ನಾನು ಹೇಳಲು ಆಗಲ್ಲ. ಡಿ.ಕೆ ಶಿವಕುಮಾರ್ ಒಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಇದನ್ನ ಹಿಂದೆಯೂ ಹೇಳಿದ್ದಾರೆ, ಈಗಲೂ ಹೇಳಿದ್ದಾರೆ. ಅಲ್ಲದೆ ಮುಂದೆಯೂ ಹೇಳುತ್ತಲೇ ಪಕ್ಷದ ಶಿಸ್ತನ್ನು ಪಾಲಿಸಿದ್ದಾರೆ. ನಮಗೆ ಈಗಲೂ ಭರವಸೆ ಇದೆ, ನಾಳೆಯೂ ಇರಲಿದೆ. ಯಾವತ್ತಾದರೂ ಒಂದು ದಿನ ಡಿ.ಕೆ ಶಿವಕುಮಾರ್ ಶ್ರಮಕ್ಕೆ ಫಲ ಸಿಗುತ್ತದೆ ಎಂದು ಅಣ್ಣನ ಪರ ಬ್ಯಾಟ್ ಬೀಸಿದ್ದಾರೆ.
ಈಗ ಡಿ.ಕೆ ಶಿವಕುಮಾರ್ ನಡೆ ಅಸಹಾಯಕತೆಯಿಂದ ಕೂಡಿದ್ದಲ್ಲ. ಆದರೆ ಪಕ್ಷಕ್ಕೆ ಗೌರವ ನೀಡುವುದು, ನಾಯಕತ್ವವನ್ನು ಗೌರವಿಸುವುದರ ಜೊತೆಗೆ ಪಕ್ಷದ ಅಧ್ಯಕ್ಷರಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ನನಗೂ ಅವರು ಸಿಎಂ ಆಗಬೇಕು ಎಂಬ ಆಸೆ ಇದೆ. ಯಾವಾಗ ಆಗುತ್ತಾರೆ ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಉತ್ತಮ ಆಡಳಿತ ಕೊಡಬೇಕು ಎನ್ನುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.
ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್, ಸಿಎಂ ಹೇಳಿಕೆಯಲ್ಲಿ ತಪ್ಪೇನಿದೆ? ಸಿಎಂ ಆಗಿರೋರು ಆಗಿ ಮುಂದುವರೆಯುತ್ತೇನೆ ಅಂದ್ರೆ ಅದರಲ್ಲಿ ತಪ್ಪೇನು? ಅವರು ಶಾಸಕಾಂಗ ಪಕ್ಷದ ನಾಯಕರು ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಕುರಿತು ಸಾಫ್ಟ್ ಕಾರ್ನರ್ ತೋರಿದ್ದಾರೆ.
ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ನಾವು ಜನರ ಹಿತವನ್ನು ಕಾಪಾಡಬೇಕು. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಚೆನ್ನಾಗಿದ್ದಾರೆ. ಇವತ್ತೂ ಚೆನ್ನಾಗಿದ್ದಾರೆ, ನಾಳೆಯೂ ಚೆನ್ನಾಗಿರ್ತಾರೆ. ನೀನು ಸಿಎಂ, ಶಾಸಕ ಆಗಬೇಕೆಂದು ನಮ್ಮ ಹಣೆಬರಹದಲ್ಲಿ ಬರೆದಿರಬೇಕು ಎಂದು ಡಿಕೆ ಸುರೇಶ್ ಮಾರ್ಮಿಕವಾಗಿ ನುಡಿದಿದ್ದಾರೆ.
ಬಿಜೆಪಿಯವರಿಗೆ ನಮ್ಮನ್ನು ಟೀಕೆ ಮಾಡುವುದೇ ಗುರಿಯಾಗಿದೆ. ಅವರಲ್ಲಿದ್ದ 75 ವರ್ಷದ ನಿಯಮ ಎಲ್ಲಿ ಹೋಗಿದೆ? ಬಿಎಸ್ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಾಗ ಚರ್ಚೆ ಮಾಡಿದ್ರು. ಈಗ ಯಾಕೆ ಬಿಜೆಪಿಯವರು ಅದನ್ನು ಚರ್ಚಿಸುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.