ಮಂಗಳೂರು : ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಂ 75ರ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯ ಬಳಿ ಗುಡ್ಡ ಕುಸಿದಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನೂ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಭೂಕುಸಿತ ಸಂಭವಿಸಿದೆ. ಇದರಿಂದ ಸ್ಥಳದಲ್ಲಿ ಉಂಟಾಗಿರುವ ಸಂಚಾರ ದಟ್ಟಣೆ ಸರಿದೂಗಿಸಲು ಅಧಿಕಾರಿಗಳು ಮಣ್ಣು ತೆರವು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಗುಡ್ಡ ಕುಸಿತದ ಮಂಗಳೂರು-ಬೆಂಗಳೂರು ಮಾರ್ಗವಾಗಿ ಸಾಗುವ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಕಾರು, ಬೈಕ್ ಸವಾರರು ಪರದಾಡುವಂತಾಗಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆಯ ಹಿನ್ನೆಲೆ ಗುಡ್ಡ ಕುಸಿತ ಸಂಭವಿಸಿದೆ. ಇದರಿಂದ ಗುಡ್ಡ ಕುಸಿದ ಮಣ್ಣು ಚತುಷ್ಪಥ ರಸ್ತೆ ಮೇಲೆ ಬಿದ್ದ ಪರಿಣಾಮ ಸಂಪೂರ್ಣ ರಸ್ತೆ ಬಂದ್ ಆಗಿದೆ. ಮಣ್ಣು ತೆರವು ಕಾರ್ಯಾಚರಣೆ ಮುಂದುವರೆದರೂ ನಿರಂತರವಾಗಿ ಮಣ್ಣು ಕುಸಿಯುತ್ತಲೇ ಇರುವುದರಿಂದ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ. ಸದ್ಯದ ಸ್ಥಿತಿಯಲ್ಲಿ ಗುಡ್ಡ ಕುಸಿಯುತ್ತಿರುವುದರಿಂದ ವಾಹನ ಸವಾರರು ಬದಲಿ ಮಾರ್ಗ ಬಳಸಲು ಎಸ್ಪಿ ಡಾ.ಅರುಣ್ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಣ್ಣು ಕುಸಿದಿದ್ದು, ಹೀಗಾಗಿ ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಚಾರ ಮಾಡಲು ಯಾವುದೇ ಅಡಚಣೆಗಳು ಎದುರಾಗಿಲ್ಲ. ಆದರೆ, ಮಂಗಳೂರಿನಿಂದ ಬೆಂಗಳೂರಿಗೆ ಹೋಗುವವರು ಬದಲಿ ಮಾರ್ಗ ಬಳಸಬೇಕಾದ ಅನಿವಾಯರ್ತೆ ಎದುರಾಗಿದೆ. ಅಲ್ಲದೆ ರಾಜ್ಯಾದ್ಯಂತ ಇಂದಿನಿಂದ ಮಳೆಯ ಪ್ರಮಾಣ ಇನ್ನಷ್ಟು ಅಧಿಕವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.




