ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಚ್.ಎಂ. ದಿನೇಶ್ ಅವರು ಆಯ್ಕೆಯಾಗಿದ್ದಾರೆ. ಅವರು 5 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಉಪಾಧ್ಯಕ್ಷರಾಗಿ ತೀರ್ಥಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 15 ಸದಸ್ಯರ ಬಲದ ಬ್ಯಾಂಕಿನಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಎಂ. ದಿನೇಶ್ ಮತ್ತು ಎಸ್.ಎಚ್. ರಾಜಶೇಖರ್ ಸ್ಪರ್ಧಿಸಿದ್ದರು. ಎಚ್.ಎಂ. ದಿನೇಶ್ ಅವರಿಗೆ 10 ಮತಗಳು, ರಾಜಶೇಖರ್ ಅವರಿಗೆ 5 ಮತಗಳು ಲಭಿಸಿದವು. ಉಪಾಧ್ಯಕ್ಷ ಸ್ಥಾನಕ್ಕೆ ತೀರ್ಥಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಸ್. ಮಂಜುನಾಥ್ ಘೋಷಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಎಚ್.ಎಂ. ದಿನೇಶ್, ಪಿಎಲ್‌ಡಿ ಬ್ಯಾಂಕ್ ಮೂಲಕ ಸರ್ಕಾರದಿಂದ ರೈತರಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಮೂಲಕ ರೈತ ಪರವಾದ ಕೆಲಸ ಮಾಡುತ್ತೇನೆ. ಎಲ್ಲರ ವಿಶ್ವಾಸ ಮತ್ತು ಪ್ರೀತಿ ಉಳಿಸಿಕೊಂಡು ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ. ನಾಗರಾಜ್ ಮಾತನಾಡಿ, ಬೇಲೂರು ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ಜೆಡಿಎಸ್–ಬಿಜೆಪಿ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಮುಂದಿನ ಎಲ್ಲ ಚುನಾವಣೆಯಲ್ಲೂ ಜಯ ಸಾಧಿಸುತ್ತೇವೆ ಎಂದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ