ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಹಾಗೂ ಸುತ್ತಲಿನ ಬೆಟ್ಟ ಪ್ರದೇಶಗಳಲ್ಲಿ ಭಾನುವಾರದಂದು ರಣ ಭೀಕರ ಭೂಕುಸಿತ ಸಂಭವಿಸಿದೆ. ಈ ಭೂಕುಸಿತಕ್ಕೆ ಡಾರ್ಜಲಿಂಗ್ ಅಕ್ಷರ ಸಹ ನಲುಗಿ ಹೋಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ದಿಕ್ಕಾಪಾಲಾಗಿ ಹೋಗಿದೆ. ಸಾವಿರಾರು ಪ್ರವಾಸಿಗರು ಬೆಟ್ಟದ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ರು.
ಸದ್ಯ ಡಾರ್ಜಿಲಿಂಗ್‌ನಲ್ಲಿ ಸಿಲುಕಿದ್ದ 500 ಪ್ರವಾಸಿಗರ ರಕ್ಷಣೆ ಮಾಡಲಾಗಿದೆ. ಈ ಪೈಕಿ 23 ಜನರು ಅಕ್ಟೋಬರ್ 4 ಮತ್ತು ಅಕ್ಟೋಬರ್ 5 ರಂದು ಡಾರ್ಜಿಲಿಂಗ್ ನಲ್ಲಿ ಭೂಕುಸಿತದಿಂದ ಸಾವನ್ನಪ್ಪಿದ್ದಾರೆ. ಈಗ ಸಾವನ್ನಪ್ಪಿದವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಆರು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಆಗುತ್ತಿರುವಂತಹ ಭಾರಿ ಮಳೆಯಿಂದಾಗಿ ಡಾರ್ಜಿಲಿಂಗ್ ಮತ್ತು ಜಲ್ಪೈಗುರಿ (Jalpaiguri) ಜಿಲ್ಲೆಗಳ ಹಲವಾರು ಪ್ರದೇಶಗಳಲ್ಲಿ ಮನೆಗಳು ಕೊಚ್ಚಿಹೋಗಿದ್ದು, ರಸ್ತೆಗಳು ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ಹಲವು ಹಳ್ಳಿಗಳು ಪ್ರತ್ಯೇಕವಾಗಿವೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. NDRF ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಭಾರಿ ಮಣ್ಣು ತೆಗೆಯುವ ಯಂತ್ರಗಳನ್ನು ಬಳಸಿ ಶೋಧ ಕಾರ್ಯದಲ್ಲಿ ತೊಡಗಿವೆ.
ಅವಶೇಷಗಳಡಿ ಸಿಲುಕಿರುವ ಇನ್ನುಳಿದವರನ್ನ ಪತ್ತೆಹಚ್ಚಲು ಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯಿಸಿದ್ದಾರೆ. ಕೇಂದ್ರದ ಕಳಪೆ ಪ್ರವಾಹ ನಿರ್ವಹಣೆಯೇ ಈ ವಿನಾಶಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಡಾರ್ಜಿಲಿಂಗ್ ಸೇರಿದಂತೆ ಉತ್ತರ ಬಂಗಾಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸಿದ್ದಾರೆ.
ಮುಖ್ಯಮಂತ್ರಿ ಸೋಮವಾರ ಮೃತರ ಸಂಬಂಧಿಕರಿಗೆ ₹5 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು ಅವರ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಉತ್ತರ ಬಂಗಾಳಕ್ಕೆ ಪ್ರಯಾಣ ಬೆಳೆಸಿ ರಕ್ಷಣಾ ಕಾರ್ಯಾಚರಣೆಗಳನ್ನ ಪರಿಶೀಲಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

