ಹಾಸನ ಜಿಲ್ಲೆಯಲ್ಲಿ ನಡೆದ ಭೀಕರ ದುರಂತದ ಘಟನೆಯೂ ಯಾರು ಮರೆಯಲು ಸಾಧ್ಯವಾಗುತ್ತಿಲ್ಲ. 9 ಮಂದಿ ಬಲಿಯಾಗಿರುವ ಕರಾಳ ದೃಶ್ಯದ ಮಧ್ಯೆ ಬೆಂಗಳೂರಲ್ಲೂ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಬೆಳ್ಳಂಬೆಳಗ್ಗೆ ನಡೆದ ಅಪಘಾತದಲ್ಲಿ, ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಕಾಮಾಕ್ಷಿಪಾಳ್ಯ ಮುಖ್ಯ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ನಾಗರಬಾವಿ ಕಡೆಯಿಂದ ಬರುತ್ತಿದ್ದ ಲಾರಿ, ಸುಮ್ಮನಹಳ್ಳಿ ರಸ್ತೆ ಬಳಿ ನಿಯಂತ್ರಣ ತಪ್ಪಿದ್ದು, ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆಟೋ ಎರಡು ತುಂಡಾಗಿದ್ದು, ಸಂಪೂರ್ಣ ನುಜ್ಜುಗುಜ್ಜಾಗಿದೆ. ಆಟೋದಲ್ಲಿದ್ದ ಯೇಸು ಮತ್ತು ಜೆನಿಫರ್ ಹಾಗೂ ಚಾಲಕ ಸ್ಥಳದಲ್ಲೇ ಮೃತರಾಗಿದ್ದಾರೆ. ಲಾರಿ ಚಾಲಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಂಟೈನರ್ ಲಾರಿ ಸ್ಟೇರಿಂಗ್ ಕಟ್ ಆಗಿದ್ದರಿಂದ ಅಪಘಾತ ಸಂಭವಿಸಿದೆ ಅನ್ನೋದು, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಆಟೋಗಷ್ಟೇ ಅಲ್ಲ, ಕಾರಿಗೂ ಕಂಟೇನರ್ ಡಿಕ್ಕಿಯಾಗಿದೆ. ಗರ್ಭಿಣಿ ಪತ್ನಿಯನ್ನ ಆಸ್ಪತ್ರೆಗೆ ಕರೆದುಕೊಂಡು ವ್ಯಕ್ತಿಯೊಬ್ರು ಹೋಗ್ತಿದ್ರು. ಪೂಜಾ ಕಲ್ಯಾಣ ಮಂಟಪ ರಸ್ತೆಯಿಂದ ಲಾರಿ ವೇಗವಾಗಿ ಬಂದಿದೆ. ಮೊದಲು ಆಟೋಗೆ ಡಿಕ್ಕಿ ಹೊಡೆದಿದೆ. ಇನ್ನೇನು ಕಾರಿಗೆ ಡಿಕ್ಕಿಯಾಗ್ಬೇಕು ಎನ್ನುವಷ್ಟರಲ್ಲಿ, ಅಲರ್ಟ್ ಆಗಿದ್ದ ವ್ಯಕ್ತಿ, ಕಾರನ್ನು ಲೆಫ್ಟ್ ಸೈಡ್‌ಗೆ ತೆಗೆದುಕೊಂಡಿದ್ದಾರೆ. ಕ್ಷಣಮಾತ್ರದಲ್ಲಿ ದೊಡ್ಡ ಅವಘಡದಿಂದ ಪಾರಾಗಿದ್ದಾರೆ.