ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತ ನಟ ದರ್ಶನ್ ಜೈಲು ಬಂಧಿಯಾಗಿದ್ದಾರೆ. ದರ್ಶನ್ ಜೈಲುಪಾಲಾಗಿದ್ದರೂ, ಅವರ ಅಭಿಮಾನಿಗಳ ಅಂಧಾಭಿಮಾನ ಮಾತ್ರ ನಿಂತಿಲ್ಲ. ಹೌದು, ದರ್ಶನ್ ಏನೇ ಮಾಡಿದರೂ ಅದು ದರ್ಶನ್ ಫ್ಯಾನ್ಸ್ ಗೆ ಖುಷಿ. ಒಂದು ರೀತಿ ಸಂಭ್ರಮ. ಅದು ತೆರೆ ಮೇಲಿನ ಖುಷಿಗೆ ಸಂಭ್ರಮಿಸಲಿ. ಆದರೆ, ಒಂದು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರೂ, ದರ್ಶನ್ ಅವರನ್ನು ಆರಾಧಿಸುತ್ತಿರೋ ಫ್ಯಾನ್ಸ್ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ವಿಷಯ ಏನಪ್ಪಾ ಅಂದರೆ, ಫ್ಯಾನ್ಸ್ ಈಗಾಗಲೇ ದರ್ಶನ್ ಜೈಲು ಸೇರಿದ ಬೆನ್ನ ಹಿಂದೆಯೇ ಅವರು ಅವರಿಗೆ ನೀಡಿದ ಖೈದಿ ನಂಬರ್ ಅನ್ನು ತಮ್ಮ ಬೈಕ್, ಕಾರ್ ಹಾಗು ಬಟ್ಟೆಗಳ ಮೇಲೆ ಹಾಕಿಸಿಕೊಂಡು ಟ್ರೋಲ್ ಗೆ ಗುರಿಯಾಗಿದ್ದರು. ಅಷ್ಟೇ ಅಲ್ಲ, 6106 ನಂಬರ್ ಅನ್ನು ಸ್ಲೇಟ್ ಮೇಲೆ ಬರೆಸಿ, ಹಿಡಿದುಕೊಂಡು ಫೋಟೋ ಶೂಟ್ ಮಾಡಿಸಿಕೊಂಡು ಸುದ್ದಿಯಾದ ಘಟನೆಯೂ ಇದೆ. ಈಗ ಅಭಿಮಾನಿಯೊಬ್ಬ ತನ್ನ ಹಾಲುಗಲ್ಲದ ಮಗುವೊಂದನ್ನು ಖೈದಿ ಮಾಡಿದ್ದಾನೆ! ಅಂದರೆ, ಆ ಮಗು ಧರಿಸಿರೋ ಬಟ್ಟೆ ಮೇಲೆ 6106 ನಂಬರ್ ಹಾಕಿ ಫೋಟೋವೊಂದನ್ನು ಹರಿಬಿಟ್ಟಿದ್ದಾನೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಅದೇನೆ ಇದ್ದರೂ, ನಟ ದರ್ಶನ್ ಅವರ ಮೇಲಿನ ಅಭಿಮಾನ ಇರಲಿ. ಆದರೆ, ಹುಚ್ಚಾಭಿಮಾನ ಬೇಡ. ಸ್ಟಾರ್ ನಟ ಅನ್ನೋ ಕಾರಣಕ್ಕೆ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಆರಾಧಿಸುವ ದೊಡ್ಡ ವರ್ಗವೇ ತುಂಬಿದೆ. ಮೊದಲಿನಿಂದಲೂ ದರ್ಶನ್ ಅವರು ಏನೇ ಹೇಳಿದರೂ, ಏನೇ ಮಾಡಿದರೂ, ಡಿ ಬಾಸ್ ಜೈ ಎನ್ನುವ ಘೋಷಣೆ ಮೊಳಗುತ್ತಿತ್ತು. ಈಗ ದರ್ಶನ್ ಜೈಲು ಸೇರಿದರೂ ಕೂಡ ಅವರನ್ನು ಎಂದಿಗಿಂತಲೂ ಹೆಚ್ಚು ಅಪ್ಪಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅವರ ಅಭಿಮಾನಿಗಳು ಟ್ರೋಲ್ ಕೂಡ ಆಗಿರುವುದುಂಟು.
ದರ್ಶನ್ ಅಭಿಮಾನಿಯೊಬ್ಬ ತನ್ನ ಹೆತ್ತ ಮಗುವನ್ನೇ ಖೈದಿ ಮಾಡುವಷ್ಟರ ಮಟ್ಟಿಗೆ ಅಭಿಮಾನ ತೋರಿದ್ದಾರೆ. ಆ ಫೋಟೋ ವೈರಲ್ ಆಗುತ್ತಿದ್ದು, ಮಿಶ್ರಪ್ರತಿಕ್ರಿಯೆ ಬರುತ್ತಿವೆ. ಆ ಫೋಟೋ ಬ್ರಾಂಡ್ ಆಫ್ ಸ್ಯಾಂಡಲ್ವುಡ್ ಡಿಬಾಸ್ ಫ್ಯಾನ್ಸ್ ಮೈಸೂರು ಹೆಸರಿನ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಹರಿಬಿಡಲಾಗಿದೆ.
ಅಭಿಮಾನ ಎಷ್ಟೇ ಇದ್ದರೂ, ಪ್ರದರ್ಶಿಸಲಿ ಆದರೆ, ದರ್ಶನ್ ಅವರಿಗೆ ಜೈಲಿನಲ್ಲಿ ನೀಡಲಾಗಿರುವ ವಿಚಾರಾಣಧೀನ ಖೈದಿ ಸಂಖ್ಯೆಯನ್ನು ಮಗುವಿಗೆ ಹಾಕಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ದರ್ಶನ್ ಅವರ ಅಭಿಮಾನಿಗಳಿಗೇನೋ ಇದು ಖುಷಿ. ಆದರೆ, ಸಾರ್ವಜನಿಕ ವಲಯದಲ್ಲಿ ಸದ್ಯಕ್ಕೆ ಟೀಕೆ ವ್ಯಕ್ತವಾಗುತ್ತಿರುವುದಂತೂ ನಿಜ.