ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy murder case)ದಲ್ಲಿ ಪರಪ್ಪನ ಅಗ್ರಹಾರ ಜೈಲಿ (Parappana Agrahara Central Jail)ನಲ್ಲಿರೋ ನಟ ದರ್ಶನ್, ರೌಡಿಶೀಟರ್ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿರೋ ವಿಡಿಯೋ ವೈರಲ್ ಆಗಿದೆ. ಸದ್ಯ ವೈರಲ್ ಆದ ಫೋಟೋ, ವಿಡಿಯೋ ಬಗ್ಗೆ ತನಿಖೆ ನಡೆಸಲು ಬೆಂಗಳೂರು ಕಾರಾಗೃಹ ಡಿಜಿ ಮಾಲಿನಿ ಕೃಷ್ಣ ಮೂರ್ತಿ ಆದೇಶಿಸಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಕಾರಾಗೃಹ ಡಿಜಿ ಮಾಲಿನಿ ಕೃಷ್ಣಮೂರ್ತಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಜೈಲಿನ ಅಧಿಕಾರಿಗಳ ಜೊತೆ ಸಭೆ ನಡೆಸಿರೋ ಕಾರಾಗೃಹ ಡಿಜಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಡಿಐಜಿ ಸೋಮಶೇಖರ್ ಹಾಗೂ ಎಐಜಿ ಆನಂದ್ ರೆಡ್ಡಿ ಅವರಿಗೆ ತನಿಖೆಯ ಹೊಣೆಯನ್ನ ಹೊರಿಸಲಾಗಿದೆ. ಈ ಬೆನ್ನಲ್ಲೇ ಪ್ರಮಾಣಿಕವಾಗಿ ತನಿಖೆ ನಡೆಯುತ್ತಾ ಅನ್ನೋ ಅನುಮಾನಗಳು ಸೃಷ್ಟಿಯಾಗಿದೆ.
ಇನ್ನು, 2022ರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಡಿಯೋ ವೈರಲ್ ಆಗಿದ್ದಾಗ ಆಗಿನ ಹೋಂ ಸೆಕರೆಟ್ರಿ ಆಗಿದ್ದ ಮಾಲಿನಿ ಕೃಷ್ಣಮೂರ್ತಿ ತನಿಖೆಯ ಜವಾಬ್ದಾರಿಯನ್ನ ಎಡಿಜಿಪಿ ಮುರುಗನ್ ಅವರಿಗೆ ಕೊಟ್ಟಿದ್ದರು. ಆದ್ರೀಗ ನಟ ದರ್ಶನ್ ಫೋಟೋ ಮತ್ತು ವಿಡಿಯೋ ಕಾಲ್ ಪ್ರಕರಣದ ತನಿಖೆಯ ಹೊಣೆಯನ್ನು ಕಾರಾಗೃಹ ಡಿಜಿ ಮಾಲಿನಿ ಕೃಷ್ಣಮೂರ್ತಿ ಜೈಲಿನ ಅಧಿಕಾರಿಗಳಿಗೆ ವಹಿಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗ್ತಿದೆ. ತನಿಖೆ ಪ್ರಮಾಣಿಕವಾಗಿ ನಡೆಯುತ್ತಾ..? ಇಲ್ಲವಾ..? ಅನ್ನೋ ಅನುಮಾನ ಎಲ್ಲರಲ್ಲೂ ಮೂಡಿದೆ.