ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ಹೇಗಾದರೂ ಮಾಡಿ ಆದಷ್ಟು ಬೇಗ ಹೊರಬರಬೇಕು ಅನ್ನೋ ಒದ್ದಾಟ ಶುರುವಾಗಿದೆ. ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ ಮೇಲೆ ಮತ್ತೆ ಜೈಲು ಪಾಲಾಗಿರುವ ದರ್ಶನ್, ಇದೀಗ ಹೊಸದೊಂದು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ ಬಳಿಕ ಮತ್ತೆ ಜೈಲು ಸೇರಿರುವ ದರ್ಶನ್, ಇದೀಗ “ಡೇ-ಟು-ಡೇ ಟ್ರಯಲ್” ನಡೆಸುವಂತೆ ಅರ್ಜಿ ಸಲ್ಲಿಸಿದ್ದಾರೆ.
ಮೆಡಿಕಲ್ ಗ್ರೌಂಡ್ಸ್ ಮೇಲೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದರಿಂದ ದರ್ಶನ್ ಮತ್ತೆ ಜೈಲು ಸೇರಿದ್ದರು. ತಿಂಗಳುಗಟ್ಟಲೆ ಜೈಲುವಾಸ ಅನುಭವಿಸುತ್ತಿರುವ ಹಿನ್ನೆಲೆ, ಪ್ರಕರಣವನ್ನು ವಿಳಂಬವಿಲ್ಲದೆ ಪ್ರತಿದಿನ ವಿಚಾರಣೆ ನಡೆಸಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ.
ಪ್ರಕರಣದ ವಿಚಾರಣೆ ಈಗಾಗಲೇ ಆರಂಭಗೊಂಡಿದ್ದು, ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಆದರೆ ತಾರೀಖುಗಳ ಮೇಲಿನ ತಾರೀಖುಗಳಿಂದ ವಿಚಾರಣೆ ವಿಳಂಬವಾಗುತ್ತಿದೆ ಎಂಬ ಕಾರಣದಿಂದ, ದರ್ಶನ್ ಪರ ವಕೀಲರು CrPC ಸೆಕ್ಷನ್ 309ರ ಅಡಿಯಲ್ಲಿ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ಗೆ ಅಧಿಕೃತ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣಾಧೀನ ಕೈದಿಯಾಗಿ ದರ್ಶನ್ ತಿಂಗಳುಗಳಿಂದ ಜೈಲಿನಲ್ಲಿದ್ದಾರೆ. ಆದ್ದರಿಂದ ಪ್ರತಿದಿನ ವಿಚಾರಣೆ ನಡೆಸಬೇಕು ಎಂಬುದು ಅರ್ಜಿಯ ಪ್ರಮುಖ ಅಂಶವಾಗಿದೆ.
ಇದಕ್ಕೆ ಸರ್ಕಾರದ ಪರ ವಿಶೇಷ ಅಭಿಯೋಜಕರು (SPP) ವಿರೋಧ ವ್ಯಕ್ತಪಡಿಸಲು ಸಿದ್ಧರಾಗಿದ್ದಾರೆ. ನ್ಯಾಯಾಲಯದ ಮೇಲೆ ಈಗಾಗಲೇ ಸಾವಿರಾರು ಪ್ರಕರಣಗಳ ಒತ್ತಡವಿರುವಾಗ, ಒಂದು ಪ್ರಕರಣಕ್ಕೆ ಮಾತ್ರ ಪ್ರತಿದಿನ ಸಮಯ ಮೀಸಲಿಡುವುದು ಪ್ರಾಯೋಗಿಕವಾಗಿ ಕಷ್ಟಕರ ಎಂದು ಪ್ರಾಸಿಕ್ಯೂಷನ್ ವಾದಿಸಬಹುದೆಂದು ತಿಳಿದುಬಂದಿದೆ.
ಕಳೆದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್, ಆರೋಪಿಗಳ ವಿರುದ್ಧದ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಕೆಳಗಿನ ನ್ಯಾಯಾಲಯಗಳಿಗೆ ಸೂಚನೆ ನೀಡಿದ್ದನ್ನು ದರ್ಶನ್ ಪರ ವಕೀಲರು ಉಲ್ಲೇಖಿಸಿದ್ದಾರೆ. ಇದೇ ಆಧಾರದಲ್ಲಿ ತ್ವರಿತ ವಿಚಾರಣೆಗೆ ಅನುಮತಿ ನೀಡಬೇಕು ಎಂದು ವಾದ ಮುಂದಿಟ್ಟಿದ್ದಾರೆ.
ಸದ್ಯ, ಈ ಅರ್ಜಿಯ ಕುರಿತು ಅಂತಿಮ ನಿರ್ಧಾರ 57ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ಕೈಯಲ್ಲಿದೆ. ಎರಡೂ ಪಾಳಯಗಳ ವಾದ ಆಲಿಸಿದ ಬಳಿಕ ನ್ಯಾಯಾಲಯ ಆದೇಶ ಹೊರಡಿಸುವ ನಿರೀಕ್ಷೆಯಿದೆ.
ವರದಿ : ಲಾವಣ್ಯ ಅನಿಗೋಳ




