Monday, October 6, 2025

Latest Posts

ಮೈಸೂರಿನಲ್ಲಿ ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲೂ ‘ದಸರಾ ಉತ್ಸವ’

- Advertisement -

ದಸರಾ ಉತ್ಸವ ಎಂದರೆ ಮೈಸೂರಿನ ಅರಮನೆ, ದೀಪಗಳ ಅಲಂಕಾರ, ಜಂಬೂ ಸವಾರಿ. ಇದರ ನೆನಪು ಬರೋದು ಸಹಜ. ಅದರಂತೆ ಉತ್ತರ ಕರ್ನಾಟಕದಲ್ಲಿಯೂ ದಸರಾ ಹಬ್ಬ ಭಕ್ತಿ, ಸಂಸ್ಕೃತಿ ಮತ್ತು ವೈಭವದೊಂದಿಗೆ ಆಚರಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಮಹಾನವಮಿ ಹಾಗೂ ದಸರಾ ಉತ್ಸವವು ನಡೆಯುತ್ತಿದೆ.

ನಾಲ್ಕು ದಶಕದ ಇತಿಹಾಸ ಹೊಂದಿರುವ ಸತ್ತಿಯ ಚಾಮುಂಡೇಶ್ವರಿ ದೇವಾಲಯವು ಸ್ಥಳೀಯ ಮತ್ತು ಸುತ್ತಲಿನ ಜಿಲ್ಲೆಗಳ ಸಾವಿರಾರು ಭಕ್ತರ ವಿಶ್ವಾಸದ ಕೇಂದ್ರವಾಗಿದೆ. ದೇವಸ್ಥಾನದ ತಾಯಿ ಮಹಾಕಾಳಿ, ಚಾಮುಂಡೇಶ್ವರಿ ಶಿಲ್ಪಕಲೆ ಮತ್ತು ಸಂಪ್ರದಾಯಗಳು ಧಾರ್ಮಿಕ ಮಹತ್ವವನ್ನು ಮತ್ತಷ್ಟು ಉನ್ನತ ಮಾಡಿವೆ. ಸ್ಥಳೀಯ ಪುರೋಹಿತರು ಸೇರಿದಂತೆ ಗ್ರಾಮದ ಜನ ಈ ಕ್ಷೇತ್ರದ ಪೂಜಾ ಕಾರ್ಯಕ್ರಮದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.

ದಸರಾ ಹಬ್ಬದ ನವಮಿ ದಿನದಂದು ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಹರಿದು ಬರುತ್ತಾರೆ. ದೇವಿಗೆ ವಿಶೇಷ ಅಲಂಕಾರ, ಹೂವಿನ ಪಲ್ಲಕ್ಕಿ, ಧ್ವಜಾರೋಹಣ ಮತ್ತು ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತದೆ. ಸ್ಥಳೀಯ ಕಲಾವಿದರು, ಮಕ್ಕಳ ತಂಡಗಳು ನವರಾತ್ರಿ ದಿನಗಳಲ್ಲಿ ಜನಪದ ನೃತ್ಯ, ಭಜನೆ, ಹರಿಕಥೆ ಮತ್ತು ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಾರೆ. ದೇವಾಲಯದ ಗೋಡೆಯ ಮೇಲೆ ನವರಾತ್ರಿ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ ಸಜ್ಜಾಗುತ್ತವೆ.

ಇಲ್ಲಿ ನಡುಗಟ್ಟಿದ ಭಕ್ತಿಭಾವ ನಿಜವಾದ ನಂಬಿಕೆಯ ಪ್ರತಿಬಿಂಬ. ಮೈಸೂರಿನಲ್ಲಿ ರಾಜವಂಶದ ಶಕ್ತಿ ಇದ್ದರೆ, ಇಲ್ಲಿ ಜನವಂಶದ ಶ್ರದ್ಧೆ ಇದೆ. ಅಧಿಕಾರಿಗಳ ವ್ಯವಸ್ಥೆ ಇಲ್ಲದಿದ್ದರೂ ಗ್ರಾಮಸ್ಥರ ನೇತೃತ್ವದಲ್ಲಿ ಎಲ್ಲವೂ ಶಿಸ್ತಿನಿಂದ ನಡೆಯುತ್ತಿದೆ. ರಸ್ತೆ, ಕುಡಿಯುವ ನೀರು, ಭಕ್ತರ ವಸತಿ ಸೌಲಭ್ಯಗಳ ಕೊರತೆಯೂ ಇದೆ. ಸ್ಥಳೀಯರು ಈ ಭಾಗವನ್ನು ಅಭಿವೃದ್ಧಿಪಡಿಸಲು ಸರ್ಕಾರದ ಕ್ರಮಗಳನ್ನು ನಿರೀಕ್ಷಿಸುತ್ತಿದ್ದಾರೆ.

ದಸರಾ ಎಂದರೆ ಮೈಸೂರಷ್ಟೇ ಅಲ್ಲ. ಚಿನ್ನದ ಅಂಬಾರಿ ಇಲ್ಲದಿದ್ದರೂ, ಸತ್ತಿಯ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದಸರಾ ಹಬ್ಬ ಆನೆ ಅಂಬಾರಿ ಮತ್ತು ವೈಭವದೊಂದಿಗೆ ನಡೆಯುತ್ತಿದೆ. ಇದು ಭಕ್ತರಿಗೆ ಅತ್ಯಂತ ವಿಶೇಷವಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss