ನವದೆಹಲಿ : ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿ ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಿದ ಕೇಂದ್ರ ಚುನಾವಣೆ ಆಯೋಗ.
ಪಂಚ ರಾಜ್ಯಗಳ ಚುನಾವಣೆ ಜೊತೆಗೆ ಕರ್ನಾಟಕದ ಬೆಳಗಾವಿ ವಿಧಾನ ಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಸಲಾಗುವುದು. ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಕೊರೊನಾ ವೈರಸ್ ಸೋಂಕಿನ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚುನಾವಣೆ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾರ್ಚ್ 2 ರಂದು ಚುನಾವಣಾ ಸಂಬಂಧ ಅಧಿಸೂಚನೆ ಹೊರಡಿಸಲಾಗುತ್ತದೆ. ಈ ಚುನಾವಣೆಗಳಲ್ಲಿ 824 ವಿಧಾನಸಭೆ ಚುನಾವಣೆಗಳಲ್ಲಿ 18.68 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಅದಕ್ಕಾಗಿ ಒಟ್ಟು 2.7 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು.
ಅಸ್ಸಾಂ ನಲ್ಲಿ ಮೂರು ಹಂತ, ಕೇರಳದಲ್ಲಿ ಒಂದು ಹಂತ, ತಮಿಳುನಾಡಿನಲ್ಲಿ ಒಂದು ಹಂತ, ಪುದುಚೇರಿಯಲ್ಲಿ ಒಂದು ಹಂತದಲ್ಲಿ ಮತದಾನ ನಡೆದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಎಂಟು ಹಂತಗಳಲ್ಲಿ ಮತದಾನ ನಡೆಸಲಾಗುತ್ತಿದೆ. ಮೇ 2 ರಂದು ಚುನಾವಣೆ ಫಲಿತಾಂಶ ಹೊರಬೀಳಲಿದೆ.
ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳಲ್ಲಿ ಏಪ್ರಿಲ್ 6 ರಂದು ಮತದಾನ ನಡೆಯಲಿದೆ. ಅಸ್ಸಾಂ ನಲ್ಲಿ ಮೂರು ಹಂತಗಳ ಮತದಾನಕ್ಕೆ ಮಾರ್ಚ್ 27, ಏಪ್ರಿಲ್ 2 ಮತ್ತು 6 ಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಇನ್ನೂ, ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ ನಡೆಯಲಿದೆ.
ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ಮಾಹಿತಿಗಳನ್ನು ರಾಜ್ಯ ಮಟ್ಟದ ಮಾಧ್ಯಮಗಳಲ್ಲಿ ಪ್ರಕಟಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದರು.