ರಾಜ್ಯದ ಸಾವಿರಾರು ಮಹಿಳೆಯರು ನಿರೀಕ್ಷಿಸುತ್ತಿರುವ ಗೃಹಲಕ್ಷ್ಮೀ ಯೋಜನೆಯ ಜುಲೈ ತಿಂಗಳ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಸ್ಪಷ್ಟನೆ ಬಂದಿದೆ. ಹೌದು ಮಹಿಳೆಯರು ನಿರೀಕ್ಷಿಸುತ್ತಿದ್ದ ಗೃಹಲಕ್ಷ್ಮೀ ಯೋಜನೆಯ ಜುಲೈ ತಿಂಗಳ ಹಣ ಬಿಡುಗಡೆ ಬಗ್ಗೆ ಮಹತ್ವದ ಘೋಷಣೆಯೊಂದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿದ್ದಾರೆ.
ಉಡುಪಿಯಲ್ಲಿ ನಡೆದ ಶ್ಯೇನ ದೃಷ್ಟಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ ಮಾತನಾಡಿದ್ದಾರೆ. ಜೂನ್ ತಿಂಗಳ ಬಾಕಿ ಉಳಿದ ಗೃಹಲಕ್ಷ್ಮೀ ಹಣವನ್ನು ಇತ್ತೀಚೆಗೆ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಈಗ ಜುಲೈ ತಿಂಗಳ ಹಣವನ್ನು ಗಣೇಶ ಚತುರ್ಥಿ ಹಬ್ಬದಂದು ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಜೂನ್ ತಿಂಗಳ ಹಣ ಬಿಡುಗಡೆ ವಿಳಂಬವಾಗಿ ಆಗಿತ್ತು. ಇದರಿಂದಾಗಿ ಹಲವಾರು ಮಹಿಳೆಯರು ಮತ್ತು ಕುಟುಂಬಗಳು ನಿರಾಸೆಗೊಂಡಿದ್ದರು. ಆದರೆ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಹೊಸ ಘೋಷಣೆಯಿಂದ, ಮಹಿಳೆಯರಿಗೆ ನಿಟ್ಟುಸಿರೆ ಬಿಟ್ಟಂತಾಗಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪ್ರಕಾರ, ಮುಂದಿನ 15 ದಿನಗಳೊಳಗೆ ಜುಲೈ ತಿಂಗಳ ಗೃಹಲಕ್ಷ್ಮೀ ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು. ಈ ಮೂಲಕ ಮಹಿಳೆಯರಿಗೆ ಸರ್ಕಾರದಿಂದ ಸಾಂತ್ವನಕರ ಸಂದೇಶವೊಂದನ್ನು ನೀಡಲಾಗಿದೆ. ಹಲವಾರು ಮಹಿಳೆಯರು ಈ ಹಣದ ನಿರೀಕ್ಷೆಯಲ್ಲಿದ್ದು, ಗಣೇಶ ಚತುರ್ಥಿಗೆ ಈ ಹಣ ಬಿಡುಗಡೆ ಆಗುವ ಸುದ್ದಿ ಅವರಿಗೆ ಸಂತಸದ ವಿಷಯವಾಗಿದೆ