ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಯ ಹಿನ್ನೆಲೆಯಲ್ಲಿ, ಹಾವೇರಿಯಲ್ಲಿ ಮಾಜಿ ಸಚಿವ ಸಿ.ಟಿ. ರವಿಯವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತನಿಖೆಯ ಬಳಿಕವೇ ಗೊತ್ತಾಗುತ್ತದೆ. ನನಗೂ ಪ್ರಾಥಮಿಕ ಮಾಹಿತಿ ಮಾತ್ರ ಬಂದಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬ್ಯಾನರ್ ತೆರವು ವಿವಾದ ಕಾರಣ ಎನ್ನುವ ಮಾಹಿತಿ ಕೇವಲ ಊಹಾಪೋಹ ಎಂದು ರವಿ ಹೇಳಿದರು. ಬ್ಯಾನರ್ ಹಾಕಿ ಒಂದು ವಾರ ಆಯ್ತು, ದತ್ತ ಜಯಂತಿಯೂ ಮುಗಿದಿದೆ. ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಇರೋದರಿಂದ ಇದು ಜಗಳಕ್ಕೆ ಕಾರಣ ಅನ್ನೋದು ಸರಿಯಲ್ಲ. ಸಂಪೂರ್ಣ ತನಿಖೆ ಬಳಿಕವೇ ಸತ್ಯ ಹೊರಬರುತ್ತದೆ,” ಎಂದು ಅವರು ಹೇಳಿದರು.
ರಾಜ್ಯದಲ್ಲಿ 63% ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಆರೋಪದ ಕುರಿತು ಮಾತನಾಡಿದ ರವಿ, ವಾಲ್ಮೀಕಿ ನಿಗಮ, ಮುಡಾ ಹಗರಣ ಸೇರಿದಂತೆ ಹಲವು ಪ್ರಕರಣಗಳನ್ನು ಉಲ್ಲೇಖಿಸಿದರು. ಸಿಎಂ ಪತ್ನಿಯ ನಿವೇಶನವನ್ನೇ ವಾಪಸು ಕೊಡಬೇಕಾದ ಪರಿಸ್ಥಿತಿ ಬಂತು. ಗುತ್ತಿಗೆದಾರರ ಸಂಘವೇ ಗಂಭೀರ ಆರೋಪಗಳನ್ನು ಮಾಡಿದೆ. ಈ ಸರ್ಕಾರದಲ್ಲಿ ಪ್ರಾಮಾಣಿಕ ಎಂದು ಹೇಳಬಹುದಾದ ಒಬ್ಬ ಸಚಿವರನ್ನೂ ನೋಡಲಾಗುತ್ತಿಲ್ಲ ಎಂದು ಕಿಡಿಕಾರಿದರು.
ಬೆಳಗಾವಿ ಅಧಿವೇಶನದಲ್ಲಿ ಭ್ರಷ್ಟಾಚಾರ, ರೈತರ ಸಮಸ್ಯೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಎಲ್ಲವನ್ನು ಚರ್ಚೆಗೆ ತರುತ್ತೇವೆ ಎಂದು ಅವರು ಹೇಳಿದರು. ರೈತರ ಪರ ಹೋರಾಡಿದ್ದೇವೆ, ಪಾದಯಾತ್ರೆ ಮಾಡಿದ್ದೇವೆ. ನಾಗೇಂದ್ರ ರಾಜೀನಾಮೆ ಕೂಡ ಹೋರಾಟದ ಫಲ ಎಂದು ರವಿ ಹೇಳಿದರು. ಕೊನೆಗೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಇನ್ನೆರಡು ವಿಕೆಟ್‌ಗಳು ಬಿಳಿಯುವ ಸಾಧ್ಯತೆ ಇದೆ ಎಂದು ರವಿ ಶಂಕೆ ವ್ಯಕ್ತಪಡಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ



