ದಾವೋಸ್/ ರಾಮನಗರ: ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೊಳಗಾದವರಿಗೆ ತಕ್ಷಣವೇ ಪರಿಹಾರ ತಲುಪುವಂತೆ ಮಾಡಲು ಕ್ರಮ ತೆಗೆದುಕೊಳ್ಳುವಂತೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಜಿಲ್ಲಾಧಿಕಾರಿಯವರಿಗೆ ಮಂಗಳವಾರ ಸೂಚಿಸಿದರು.
ಮಳೆ ಅನಾಹುತ ತಡೆಗೆ ಜಿಲ್ಲಾಡಳಿತ ಮಾಡಿಕೊಂಡಿರುವ ತಯಾರಿ ಸಂಬಂಧ ದಾವೋಸ್ ನಿಂದ ವಿಡಿಯೊ ಕಾನ್ಫರೆನ್ಸ್ ಸಭೆ ನಡೆಸಿದ ಅವರು, ಇದುವರೆಗೆ ಜಿಲ್ಲೆಯಲ್ಲಿ ಆಗಿರುವ ಹಾನಿಯ ಬಗ್ಗೆಯೂ ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಡಾ.ಅನಿನಾಶ್ ಮೆನನ್ ರಾಜೇಂದ್ರನ್ ಅವರು ಈ ಬಗ್ಗೆ ಅಂಕಿಅಂಶ ಕೊಟ್ಟು, ಜಿಲ್ಲೆಯಲ್ಲಿ ಮಳೆಯಿಂದ 77 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ, 2 ಎಕರೆ ರಾಗಿ ಬೆಳೆಗೆ ಹಾಗೂ ಸುಮಾರು 100 ಮನೆಗಳಿಗೆ ಹಾನಿ ಆಗಿದೆ ಎಂದು ತಿಳಿಸಿದರು. ಆಗ ಸಚಿವರು ತಕ್ಷಣವೇ, ಈ ಸಂತ್ರಸ್ತರೆಲ್ಲರಿಗೂ ತಕ್ಷಣವೇ ಪರಿಹಾರ ತಲುಪುವಂತೆ ಮಾಡಲು ಕ್ರಮ ವಹಿಸಲು ನಿರ್ದೇಶಿಸಿದರು. ಜೊತೆಗೆ, ಮುಂದಿನ 3 ತಿಂಗಳನ್ನು ಗಮನದಲ್ಲಿರಿಸಿಕೊಂಡು ಮಳೆ ಸಮಸ್ಯೆ ನಿರ್ವಹಣೆಗೆ ಸನ್ನದ್ಧವಾಗಲು ಜಿಲ್ಲಾಡಳಿತಕ್ಕೆ ಸೂಚಿಸಿದರು.
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಐದು ವರ್ಷಗಳ ಹಿಂದೆ ಶುರುವಾದ ರೀಸ್ಟ್ರಕ್ಚರಿಂಗ್ ಕಾಮಗಾರಿ ಇನ್ನೂ ಮುಗಿದಿಲ್ಲ. ಹೀಗಾಗಿ, ನೀರು ಸಂಗ್ರಹವಾಗದೆ ಮಂಚನಬೆಲೆ ಜಲಾಶಯಕ್ಕೆ ಬರುತ್ತಿದೆ. ಇದು ಮಂಚನಬೆಲೆ ಜಲಾಶಯದ ವ್ಯಾಪ್ತಿಯ ಕೆಲವೆಡೆಗಳಲ್ಲಿ ನೀರು ನುಗ್ಗಲು ಕಾರಣವಾಗಬಹುದು ಎಂಬ ವಿಷಯವನ್ನು ಜಿಲ್ಲಾಧಿಕಾರಿಯವರು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಸಂಬಂಧವಾಗಿ ಒಂದು ವಾರದೊಳಗೆ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.
ಕೆ.ಆರ್.ಎಸ್.ಜಲಾಶಯದಿಂದ ನೀರನ್ನು ಬಿಟ್ಟರೆ ಸಂಗಮದ ಹತ್ತಿರದಲ್ಲಿರುವ ಬೊಮ್ಮಸಂದ್ರದಲ್ಲಿ ಪ್ರವಾಹ ಉಂಟಾಗಿ ನೀರು ನುಗ್ಗುತ್ತದೆ. ಕೆ.ಆರ್.ಎಸ್.ಜಲಾಶಯದಿಂದ ನೀರನ್ನು ಬಿಡುವಾಗ 24 ಗಂಟೆ ಮುಂಚಿತವಾಗಿ ಮಾಹಿತಿ ಕೊಟ್ಟರೆ ಸಿದ್ಧತೆ ಮಾಡಿಕೊಳ್ಳಲು ಸಮಯ ಸಾಕಾಗುವುದಿಲ್ಲ. ಆದ್ದರಿಂದ ಕನಿಷ್ಠ 48 ಗಂಟೆ ಮುಂಚಿತವಾಗಿ ನೀರು ಬಿಡುವ ಬಗ್ಗೆ ಮಾಹಿತಿ ಒದಗಿಸಿದರೆ ಅಲ್ಲಿ ಯಾವುದೇ ಅನಾಹುತವಾಗದಂತೆ ತಯಾರಿ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆಗ ಸಚಿವರು, ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತರುವುದಾಗಿ ಹೇಳಿದರು.
ಇದೇ ವೇಳೆ ಸಚಿವರು, ಜಿಲ್ಲೆಯಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಆದೇಶಿಸಿದರು.
ಹಲವು ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.




