ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯ ಹಿನ್ನೆಲೆಯಲ್ಲಿ ತೀವ್ರ ಪೈಪೋಟಿ ಹೆಚ್ಚಾಗುತ್ತಿದೆ. ವಿಶ್ವರಾಜ್ ಶುಗರ್ಸ್ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಲಾಂಗು, ಮಚ್ಚು ಹಿಡಿದು ಫುಡಾರಿಗಳು ನಿಂತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದೀಗ ಈ ಕ್ಷೇತ್ರದಲ್ಲಿ ಎರಡು ಬಲ ಶಕ್ತಿಗಳ ಮಧ್ಯೆ ತೀವ್ರ ಪೈಪೋಟಿ ಇದೆ. ಒಂದು ಕಡೆ ಸಚಿವ ಸತೀಶ್ ಜಾರಕಿಹೊಳಿ ಬಣ. ಇನ್ನೊಂದು ಕಡೆ ಕತ್ತಿ ಬಣ. ಈ ಎರಡು ಬಣಗಳ ನಡುವೆ ಜಟಾಪಟಿ, ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ. ಹೀಗಾಗಿ, ಪ್ರತಿ ಬಣ ತಮ್ಮಸದಸ್ಯರನ್ನು ಕಾಪಾಡಲು ಭದ್ರತೆ ಒದಗಿಸಲಾಗುತ್ತಿದೆ. ಅದು ಈಗ ಜನ ಸಾಮಾನ್ಯರಲ್ಲಿ ಭಯ ಉಂಟುಮಾಡಿದೆ.
ಚುನಾವಣಾ ಪೈಪೋಟಿಯಲ್ಲಿ ಸತೀಶ್ ಜಾರಕಿಹೊಳಿ ಮತ್ತು ರಮೇಶ ಕತ್ತಿ ಅವರ ಶಿಷ್ಯರಲ್ಲಿ ತೀವ್ರ ರಾಜಕೀಯ ಸ್ಪರ್ಧೆ ಕಾಣಿಸಿಕೊಂಡಿದೆ. ಈ ಪೈಪೋಟಿಯಲ್ಲಿ ಸಹಕಾರಿ ಸಂಘದ ಸದಸ್ಯರನ್ನು ವಿರೋಧಿ ಬಣ ಅಪಹರಿಸಬಾರದು ಅನ್ನುವ ಆತಂಕದಿಂದಲೇ ರಕ್ಷಣೆಗೆ ಈ ರೀತಿಯ ಭದ್ರತಾ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ವಿಡಿಯೋದಲ್ಲಿ ವಿವಿಧ ಮಂದಿ ಲಾಂಗು, ಮಚ್ಚು ಮೊದಲಾದ ಶಸ್ತ್ರಾಸ್ತ್ರಗಳನ್ನು ಹಿಡಿದು ಕಾರ್ಖಾನೆಯ ಸುತ್ತ ಮುತ್ತ ಓಡಾಡುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಈ ದೃಶ್ಯಗಳು ಸಾರ್ವಜನಿಕರು ಮತ್ತು ಸಾಮಾಜಿಕ ಕಾರ್ಯಕರ್ತರ ಕಾಳಜಿಗೆ ಕಾರಣವಾಗಿದೆ. ಕಾನೂನು ಮೀರಿದ ಈ ರೀತಿ ಕಾವಲು ನಿಲ್ಲುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಮುಂದುವರಿದಿದೆ.
ಇನ್ನು ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಯ ಪ್ರತಿಕ್ರಿಯೆ ಇನ್ನೂ ಬಹಿರಂಗವಾಗಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಶಾಂತಿ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.
ವರದಿ: ಲಾವಣ್ಯ ಅನಿಗೋಳ