ರಾಜ್ಯ ರಾಜಕೀಯದಲ್ಲಿ ಕಮಿಷನ್ ವಿಚಾರ ಮತ್ತೆ ಕಿಚ್ಚು ಹಚ್ಚಿದೆ. ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪಗಳನ್ನು ಮಾಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ, ಗುತ್ತಿಗೆದಾರರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ ಬಾಕಿ ಹಣ ಬಿಡುಗಡೆ ವಿಳಂಬವಾಗಿರುವ ಹಿನ್ನೆಲೆ, ಗುತ್ತಿಗೆದಾರರು ಇದೀಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲೂ ಕಮಿಷನ್ ಪ್ರಮಾಣ ಹೆಚ್ಚಾಗಿದೆ. ನಾವು 60 ಅಥವಾ 80 ಪರ್ಸೆಂಟ್ ಎಂದು ಹೇಳಿಲ್ಲ, ಆದರೆ ಸಮಸ್ಯೆ ಗಂಭೀರವಾಗಿದೆ ಎಂದು ಆರೋಪಿಸಿದರು. ಒಟ್ಟು 52,000 ಕೋಟಿ ರೂ. ಬಾಕಿ ಇದ್ದಲ್ಲಿ ಕೆಲ ಇಲಾಖೆಗಳು ಮಾತ್ರ ಭಾಗಶಃ ಹಣ ಬಿಡುಗಡೆ ಮಾಡಿವೆ. ಇನ್ನೂ 33,000 ಕೋಟಿ ರೂ. ಬಾಕಿ ಉಳಿದಿದೆ ಎಂದು ಹೇಳಿದರು. ಇನ್ನೊಂದು ತಿಂಗಳು ಕಾಲಾವಕಾಶ ಕೊಡುತ್ತೇವೆ. ಆಗಲೂ ಹಣ ಬಿಡುಗಡೆ ಆಗದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಗುತ್ತಿಗೆದಾರರ ಪ್ರಕಾರ, ನೀರಾವರಿ ಇಲಾಖೆಯಿಂದ ₹12,000 ಕೋಟಿ, ಪಿಆರ್‌ಡಿ ಇಲಾಖೆಯಿಂದ ₹3,600 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ₹3,200 ಕೋಟಿ, ನಗರಾಭಿವೃದ್ಧಿ ಇಲಾಖೆಯಿಂದ ₹2,000 ಕೋಟಿ, ಮಹಾತ್ಮ ಗಾಂಧಿ ಯೋಜನೆಯಡಿ ₹1,600 ಕೋಟಿ, ಹೌಸಿಂಗ್ ಇಲಾಖೆಯಿಂದ ₹1,200 ಕೋಟಿ ಹಾಗೂ ಕಾರ್ಮಿಕ ಇಲಾಖೆಯಿಂದ ₹800 ಕೋಟಿ ರೂ. ಬಾಕಿ ಇದೆ. ಈ ಹಣ ಬಿಡುಗಡೆ ಆಗದಿದ್ದರೆ, ವಿಷ ಕುಡಿಯುವ ಸ್ಥಿತಿ ಎದುರಾಗುತ್ತದೆ ಎಂದು ಗುತ್ತಿಗೆದಾರರು ಅಸಹಾಯಕತೆ ತೋಡಿಕೊಂಡಿದ್ದಾರೆ.
ಈ ಆರೋಪಗಳ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಗುತ್ತಿಗೆದಾರರು ಕೋರ್ಟ್‌ಗೆ ಹೋಗಲಿ ಎಂದು ಹೇಳಿದ್ದಾರೆ. ಮಂಜುನಾಥ್ ತಿರುಗೇಟು ನೀಡಿ, ನಾವು ಕೋರ್ಟ್‌ಗೆ ಹೋಗಲ್ಲ, ಮುಷ್ಕರ ಮಾಡುತ್ತೇವೆ. ಸಿಎಂ ಹೋಗಲಿ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಗುತ್ತಿಗೆದಾರರ ಹೋರಾಟ ಮತ್ತೊಮ್ಮೆ ರಾಜಕೀಯ ಕಣಕ್ಕೆ ಪ್ರವೇಶಿಸಿದ್ದು, ವಿರೋಧ ಪಕ್ಷಗಳಿಗೆ ಕಮಿಷನ್ ವಿಚಾರದಲ್ಲಿ ಸರ್ಕಾರದ ವಿರುದ್ಧ ಅಸ್ತ್ರ ಸಿಕ್ಕಂತಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ