ಹು – ಧಾ ಪಾಲಿಕೆ ವಿರುದ್ಧ PIL ಹಾಕಲು ನಿರ್ಧಾರ, ವಾರ್ಡ್ ಸಮಿತಿ ವಿಳಂಬಕ್ಕೆ ಕೋರ್ಟ್ ಮೊರೆ!

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಈ ಪಾಲಿಕೆಯ ವಿರುದ್ಧವೇ ಈಗ ವಾರ್ಡ್ ಸಮಿತಿ PIL ಹಾಕಲು ಮುಂದಾಗಿದೆ. ಅವಳಿನಗರದ ನಾಗರಿಕನ್ನೊಳಗೊಂಡ ವಾರ್ಡ್ ಸಮಿತಿ ರಚನೆಗೆ ಸಾಕಷ್ಟು ವಿಳಂಬ ಆಗಿರುವುದರಿಂದ ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಕೇಸ್ ದಾಖಲಿಸಲು ಹುಬ್ಬಳ್ಳಿ-ಧಾರವಾಡ ವಾರ್ಡ್‌ ಸಮಿತಿ ಬಳಗ ಟ್ರಸ್ಟ್ ಮುಂದಾಗಿದೆ.

ನಾಲೈದು ವರ್ಷಗಳಾದರೂ ವಾರ್ಡ್ ಸಮಿತಿ ರಚಿಸುವಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ. ಅವಳಿ ನಗರದ ಜನಪ್ರತಿನಿಧಿಗಳೂ ಪಾಲಿಕೆ ಸದಸ್ಯರು ಸೇರಿದಂತೆ ಆಸಕ್ತಿ ತೋರಿಲ್ಲ. ಇದರಿಂದ ಬೇಸತ್ತು ಟ್ರಸ್ಟ್ ಕಾನೂನು ಹೋರಾಟಕ್ಕೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರನ್ನು ಭೇಟಿ ಮಾಡಿದ್ದಾರೆ.

ಅವರ ಸಲಹೆಯಂತೆ ಅಂತಿಮ ಮನವಿ ಹಾಗೂ PIL ಕೇಸ್ ದಾಖಲಿಸುವ ಕುರಿತು ಮುನ್ಸೂಚನೆ ನೀಡುವ ಮನವಿಯನ್ನ ಸೆಪ್ಟೆಂಬರ್‌ 3ರಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಿಗೆ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂದ್ರೆ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿತ್ತು.

ಇದಕ್ಕೆ 15 ದಿನಗಳ ಗಡುವು ನೀಡಿ, ಸ್ವೀಕೃತಿ ಪ್ರತಿಯನ್ನು ಪಡೆಯಲಾಗಿತ್ತು. ಆದರೆ, ಈವರೆಗೆ ಯಾರೊಬ್ಬರೂ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ PIL ಹೂಡುವುದು ಅನಿವಾರ್ಯವಾಗಿದೆ. ಈ ಸಂಬಂಧ ಹುಬ್ಬಳ್ಳಿಯ ಹೊಸೂರಿನಲ್ಲಿರುವ ಟ್ರಸ್ಟ್‌ನ ಕಚೇರಿಯಲ್ಲಿ ಭಾನುವಾರ ಸಾರ್ವಜನಿಕ ಸಭೆ ಕರೆಯಲಾಗಿತ್ತು.

ವಾರ್ಡ್ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲು ಪಾಲಿಕೆ 3 ಬಾರಿ ಅರ್ಜಿ ಆಹ್ವಾನಿಸಿತ್ತು. ಸಾವಿರಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದರು. ಆದರೆ, ಸಮಿತಿ ರಚನೆ ಮಾಡಲಿಲ್ಲ. ಸದ್ಯದಲ್ಲಿಯೇ ಅರ್ಜಿದಾರರ ಸಮಾವೇಶ ನಡೆಯಲಿದೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ವರದಿ : ಲಾವಣ್ಯ ಅನಿಗೋಳ

 

About The Author