ದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನ ಪ್ರಭಾವಿ ನಾಯಕಿ ಶೀಲ ದೀಕ್ಷಿತ್ ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶೀಲಾ ದೀಕ್ಷಿತ್ ರನ್ನು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರು ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದಾಗಿ ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದ್ದ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್(81) ನಿಧನರಾಗಿದ್ದಾರೆ. ಕಾಂಗ್ರೆಸ್ ನ ಅತ್ಯಂತ ಪ್ರಭಾವಿ ನಾಯಕರಲ್ಲೊಬ್ಬರಾಗಿದ್ದ ಶೀಲಾ ದೀಕ್ಷಿತ್ ದೆಹಲಿಯಲ್ಲಿ ಸತತವಾಗಿ 3 ಬಾರಿ ಸಿಎಂ ಆಗಿ ಆಡಳಿತ ನಡೆಸಿದ್ದರು. ತಮ್ಮ ಜನಪರ ಯೋಜನೆಗಳಿಂದ ಜನರ ಮನಗೆದ್ದಿದ್ದ ಶೀಲಾ ದೀಕ್ಷಿತ್ 1998ರಿಂದ 2013ರವರೆಗೂ ದೆಹಲಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ರು. ಹೀಗಾಗಿ ಇವರ ನಾಯಕತ್ವ ಗುಣಗಳನ್ನು ಗುರುತಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.

ದೆಹಲಿಯನ್ನು ಹಸಿರುಮಯವಾಗಿಸುವ ನಿಟ್ಟಿನಲ್ಲಿ ಶೀಲಾ ದೀಕ್ಷಿತ್ ಲಕ್ಷಾಂತರ ಸಂಖ್ಯೆಯಲ್ಲಿ ಗಿಡ ಮರಗಳನ್ನು ನೆಡುವ ಮೂಲಕ ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ರು. ಇನ್ನು ತಮ್ಮ ಇಳಿವಯಸ್ಸಿನಲ್ಲೂ ಉತ್ಸುಕತೆಯಿಂದ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶೀಲಾ ದೀಕ್ಷಿತ್ ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ವಿರುದ್ಧ ಸೋಲನುಭವಿಸಿದ್ರು. ಇನ್ನು ಶೀಲಾರ ನಿಧನದ ಸುದ್ದಿ ತಿಳಿದ ಕಾಂಗ್ರೆಸ್ ನಾಯಕರು ಇದೀಗ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.