ಜನಪ್ರಿಯ ಮೆಸೇಜಿಂಗ್ ವೇದಿಕೆ ವಾಟ್ಸ್‌ಆ್ಯಪ್ ಒದಗಿಸುತ್ತಿರುವ ಪೇಮೆಂಟ್ ವ್ಯವಸ್ಥೆಯನ್ನು ಇನ್ನು ಮುಂದೆ ಎಲ್ಲ ಭಾರತೀಯರು ಬಳಕೆ ಮಾಡಬಹುದಾಗಿದೆ. ಹೌದು ಸುರಕ್ಷತಾ ದೃಷ್ಟಿ ಯಿಂದ ಈ ಮೊದಲು ಕೇವಲ 10 ಕೋಟಿ ಜನರಿಗಷ್ಟೇ ಬಳಕೆಗೆ ಅವಕಾಶ ಒದಗಿಸಲಾಗಿತ್ತು.
ವಾಟ್ಸ್‌ಆ್ಯಪ್ ಪೇ ಬಳಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪೇಮೆಂಟ್ಸ್ ಕಾರ್ಪೋರೇಶನ್ (ಎನ್‌ಪಿಸಿಐ) ಈ ಹಿಂದೆ ವಿಧಿಸಿದ್ದ ನಿರ್ಬಂಧಗಳನ್ನು ಬುಧವಾರ ತೆಗೆದುಹಾಕಿದೆ. ಹೀಗಾಗಿ ಇನ್ನು ಮುಂದೆ ಭಾರತೀಯರೆಲ್ಲ ವಾಟ್ಸ್‌ಆ್ಯಪ್‌ನ ಯುಪಿಐ ಸೇವೆಯನ್ನು ಬಳಸಬಹುದಾಗಿದೆ. ಈವರೆಗೆ ವಾಟ್ಸ್ ಆ್ಯಪ್ ಎನ್‌ಪಿಸಿಐನ ಎಲ್ಲ ನಿಯಮ ಗಳನ್ನು ಪಾಲನೆ ಮಾಡಿದ ಕಾರಣ ಮಿತಿ ಯನ್ನು ತೆಗೆಯಲಾಗಿದೆ. ನಿರ್ಬಂಧಗಳನ್ನು ತೆಗೆದ ಬಳಿಕ ವಾಟ್ಸ್ ಆ್ಯಪ್ ಪೇ ತನ್ನ ಬಳಕೆದಾರರನ್ನು 50 ಕೋಟಿಗೆ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ.
ಪ್ರಸ್ತುತ ಇರುವ ಯುಪಿಐಗಳಿಗೆ ಸವಾಲು: ಭಾರತದಲ್ಲಿ ಹೆಚ್ಚಾಗಿ ವಾಟ್ಸ್‌ಆ್ಯಪ್ ಸೇವೆಯನ್ನು ಬಳಸಲಾಗುತ್ತಿದೆ. ಹೀಗಾಗಿ ವಾಟ್ಸ್‌ಆ್ಯಪ್ ಪೇ ಉಳಿದ ಯುಪಿಐ ಸೇವೆಗಳಾದ ಗೂಗಲ್ ಪೇ, ಫೋನ್ ಪೇ, ಪೇಟಿಎಂಗಳಿಗೆ ಸವಾಲು ಒಡ್ಡಬಹುದು ಎನ್ನಲಾಗಿದೆ.