INDIA ಒಕ್ಕೂಟದಲ್ಲಿ ಭಿನ್ನಮತ ಈಗ ತಾರಕಕ್ಕೇರಿದೆ. ಸದ್ಯ ಕಾಂಗ್ರೆಸ್ ವಿರುದ್ಧ ಆಪ್ ಬಂಡಾಯದ ಬಾವುಟ ಹಾರಿಸಿದೆ. ಆಪ್ ನಾಯಕ ಅರವಿಂದ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಯಿಂದ ಆಪ್ ಕೆಂಡವಾಗಿದ್ದು INDIA ಒಕ್ಕೂಟದಿಂದ ಕಾಂಗ್ರೆಸ್ ಪಕ್ಷವನ್ನು ಉಚ್ಚಾಟನೆ ಮಾಡುವಂತೆ ಇತರ ಪಕ್ಷಗಳ ಜೊತೆ ಮನವಿ ಮಾಡಿದೆ ಅಂತ ವರದಿಯಾಗಿದೆ.
ದೆಹಲಿಯಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳಲು ಅರವಿಂದ್ ಕೇಜ್ರಿವಾಲ್ ಕಾರಣ. 2013 ರಲ್ಲಿ ಆಪ್‌ನ 40 ದಿನಗಳ ಸರ್ಕಾರಕ್ಕೆ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್ ದೆಹಲಿಯಲ್ಲಿ ದುರ್ಬಲವಾಗಿದೆ ಅಂತ ಅಜಯ್ ಮಾಕೇನ್ ಡಿ.25 ಹೇಳಿಕೆ ನೀಡಿದ್ದರು.
ಅಜಯ್ ಮಾಕೆನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಆಪ್ ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಉಚ್ಚಾಟನೆಗೆ ಬೇಡಿಕೆ ಇಟ್ಟಿದೆ. ಈ ವಿಚಾರದ ಬಗ್ಗೆ ಇಂದು ಅಧಿಕೃತವಾಗಿ ಆಪ್ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ತಿಳಿಸುವ ಸಾಧ್ಯತೆಯಿದೆ. ಲೋಕಸಭಾ ಚುನಾವಣೆಯ ಬಳಿಕ ಆಪ್ ಮತ್ತು ಕಾಂಗ್ರೆಸ್ ಮಧ್ಯೆ ತಿಕ್ಕಾಟ ಜೋರಾಗಿದೆ. ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ.
ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಅಂತ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಚುನಾವಣೆಯಲ್ಲಿ ಯಾವುದೇ ಮೈತ್ರಿ ಇರುವುದಿಲ್ಲ ಮತ್ತು ಮೂರನೇ ಬಾರಿಗೆ ಎನ್‌ಸಿಟಿ ಸರ್ಕಾರವನ್ನು ಉಳಿಸಿಕೊಳ್ಳಲು ಎಎಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಅಂತ ಇತ್ತೀಚೆಗೆ ಹೇಳಿದ್ದರು.
ಮೈತ್ರಿ ಕುರಿತ ಊಹಾಪೋಹಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೆಹಲಿಯಲ್ಲಿ ಯಾವುದೇ ಮೈತ್ರಿ ಇರುವುದಿಲ್ಲ ಅಂತ ಸ್ಪಷ್ಟಪಡಿಸಿದರು. ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಭಾರತೀಯ ಜನತಾ ಪಕ್ಷ ವಿರುದ್ಧ ಕೈಜೋಡಿಸಬಹುದೆಂದು ಈ ಹಿಂದೆ ಊಹಿಸಲಾಗಿತ್ತು.
ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ನನ್ನ ಮೇಲೆ ಯಾರೋ ದ್ರವ ಪದಾರ್ಥ ಎಸೆದಿದ್ದರು. ನಾನು ಈ ವಿಚಾರವನ್ನು ಪ್ರಸ್ತಾಪಿಸಿದ ನಂತರ ಅಮಿತ್ ಶಾ ಅವರು ಏನಾದರೂ ಕ್ರಮ ಕೈಗೊಳ್ಳುತ್ತಾರೆ ಎಂಬ ನಿರೀಕ್ಷೆ ನನ್ನಲ್ಲಿತ್ತು. ಆದರೆ ಅದು ಹುಸಿಯಾಗಿದೆ ಎಂದರು.