2025ರಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ದೆಹಲಿ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತದಾರರನ್ನು ಓಲೈಸಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ.
ಸದ್ಯ ಮುಂಬರುವ ಚುನಾವಣೆಯ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿರುವ ಕೇಜ್ರಿವಾಲ್, ಇದೀಗ ಮತ್ತೊಂದು ಪ್ರಮುಖ ಘೋಷಣೆಯನ್ನು ಮಾಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್, ದೆಹಲಿಯ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರಿಗೆ ಗೌರವಧನ ನೀಡುವುದಾಗಿ ಘೋಷಿಸಿದ್ದಾರೆ.
ಮಹಿಳಾ ಸಮ್ಮಾನ್ ರಾಶಿ ಮತ್ತು ಸಂಜೀವನಿ ಯೋಜನೆ ನಂತರ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೋಮವಾರ ದೆಹಲಿಯ ಎಲ್ಲಾ ಅರ್ಚಕರು ಮತ್ತು ಅರ್ಚಕರಿಗೆ ಪ್ರತಿ ತಿಂಗಳು 18,000 ರೂಪಾಯಿ ವೇತನವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ದೆಹಲಿಯ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರಿಗೆ ಮತ್ತು ಗುರುದ್ವಾರಗಳಲ್ಲಿ ಕೆಲಸ ಮಾಡುವ ಗುರುಗಳಿಗೆ ಪ್ರತಿ ತಿಂಗಳು 18,000 ಗೌರವಧನ ನೀಡಲು ನಿರ್ಧರಿಸಿದ್ದೇವೆ ಅಂದಿದ್ದಾರೆ.
ನಾಳೆಯಿಂದಲೇ ಈ ಯೋಜನೆಗೆ ನೋಂದಣಿ ಆರಂಭವಾಗಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದು, ಮಂಗಳವಾರ, ನಾನೇ ಅದನ್ನು ಕನ್ನಾಟ್ ಪ್ಲೇಸ್‌ನ ಹನುಮಾನ್ ದೇವಾಲಯದಿಂದ ಪ್ರಾರಂಭಿಸುತ್ತೇನೆ. ನಂತರ ನಮ್ಮ ಎಲ್ಲಾ ಅಭ್ಯರ್ಥಿಗಳು ಅದನ್ನು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ನೋಂದಾಯಿಸಿಕೊಳ್ಳಲಿದ್ದಾರೆ ಅಂತ ಕೇಜ್ರಿವಾಲ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಗೆದ್ದರೆ ದೆಹಲಿಯ ದೇವಸ್ಥಾನಗಳ ಅರ್ಚಕರು ಮತ್ತು ಗುರುದ್ವಾರ ಸಾಹಿಬ್‌ನ ಗುರುಗಳಿಗೆ ತಿಂಗಳಿಗೆ ₹18,000 ಗೌರವಧನ ನೀಡಲಾಗುತ್ತದೆ. ಈ ಯೋಜನೆಯು ಸಮಾಜಕ್ಕೆ ಅವರ ಆಧ್ಯಾತ್ಮಿಕ ಕೊಡುಗೆ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಅವರ ಪ್ರಯತ್ನಗಳಿಗೆ ಗೌರವವಾಗಿದೆ ಅಂತ ಕೇಜ್ರಿವಾಲ್ ಹೇಳಿದ್ದಾರೆ
ಸಿಎಂ ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವಿನಿ ಯೋಜನೆಯಂತಹ ಅರ್ಚಕರ ಯೋಜನೆ ಮತ್ತು ಅನುದಾನವನ್ನು ವಿರೋಧಿಸಬೇಡಿ ಎಂದು ಆಪ್ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಬಿಜೆಪಿ ನಾಯಕರಿಗೆ ಮನವಿ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ನಿನ್ನೆ ದೆಹಲಿಯ ಜನರ ಬಗ್ಗೆ ಬಿಜೆಪಿಗೆ ಯಾವುದೇ ದೂರದೃಷ್ಟಿ ಇಲ್ಲ ಎಂದು ದೂರಿದ್ದರು. ಬಿಜೆಪಿಗೆ ಸರಿಯಾದ ಅಭ್ಯರ್ಥಿಗಳೂ ಇಲ್ಲ. ಬಿಜೆಪಿ ಅಪ್ರಮಾಣಿಕವಾಗಿ ಚುನಾವಣೆ ಗೆಲ್ಲಲು ಯತ್ನಿಸುತ್ತಿದೆ. ಮಹಾರಾಷ್ಟ್ರ ಮತ್ತು ಹರ್ಯಾಣದಂತೆ ದೆಹಲಿಯಲ್ಲೂ ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ, ಆದರೆ ನಾವು ಹಾಗೆ ಮಾಡಲು ಬಿಡುವುದಿಲ್ಲ ಅಂತ ಹೇಳಿದ್ದರು.