ಶವ ಪರೀಕ್ಷೆ ಮುಗಿಸಿ ₹5 ಲಕ್ಷಕ್ಕೆ ಬೇಡಿಕೆ!

ಬಾಲಕಿ ಮೃತಪಟ್ಟ ಬಳಿಕ ಶವ ಪರೀಕ್ಷೆ ಮುಗಿಸಿ ₹5 ಲಕ್ಷಕ್ಕೆ ವೈದ್ಯರೊಬ್ಬರು ಬೇಡಿಕೆ ಇಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ವಂದನಾ ತುಪ್ಪದ ಎಂಬ 14 ವರ್ಷದ ಬಾಲಕಿ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿರಾಯು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಬಾಲಕಿಯ ಕೈ ಮೇಲೆ ಗುಳ್ಳೆಗಳು ಇದ್ದ ಕಾರಣ, ಶಸ್ತ್ರಚಿಕಿತ್ಸೆ ಮಾಡಬೇಕೆಂದು ಪೋಷಕರಿಗೆ ತಿಳಿಸಲಾಗಿತ್ತು. ಇಂಜೆಕ್ಷನ್ ಸಮೇತ ಸಲಾಯಿನ್ ಹಚ್ಚಿದ್ದರು ಬಳಿಕ ಬಾಲಕಿ ಅಸ್ವಭಾವಿಕವಾಗಿ ವರ್ತಿಸಲು ಆರಂಭಿಸುತ್ತಾಳೆ, ನಂತರ ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ತಕ್ಷಣವೇ ಪೋಷಕರು ಇನ್ನೊಂದು ಆಸ್ಪತ್ರೆಗೆ ಕರೆದೊಯ್ದರು ಕೂಡ ಅಲ್ಲಿ ವೈದ್ಯರು ಬಾಲಕಿ ಸಾವನ್ನಪ್ಪಿದ್ದಾರೆಂದು ಘೋಷಿಸುತ್ತಾರೆ.

ಈ ಅಸಹಜ ಸಾವು ಕುರಿತಂತೆ ಪೋಷಕರು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ, UDR ದಾಖಲಾಗುತ್ತೆ. ವಂದನಾ ಅವರ ಮರಣೋತ್ತರ ಪರೀಕ್ಷೆಯನ್ನು ಹಾವೇರಿ ವೈದ್ಯಕೀಯ ಮಹಾವಿದ್ಯಾಲಯದ ನ್ಯಾಯ ವೈದ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಗುರುರಾಜ ಬಿರಾದಾರ ನಡೆಸಿದಾಗ, ಈ ಪ್ರಕರಣ ಇನ್ನೊಂದು ತಿರುವು ಪಡೆದುಕೊಂಡಿದೆ.

ಡಾ. ಗುರುರಾಜ ಬಿರಾದಾರ, ವಂದನಾ ಅವರ ಮರಣೋತ್ತರ ಪರೀಕ್ಷೆಯ ವರದಿಯನ್ನು ಆಸ್ಪತ್ರೆ ಪರವಾಗಿ ಬರೆಯುವುದಾಗಿ ಹೇಳಿ, ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಆರೋಪವು ಲೋಕಾಯುಕ್ತ ತನಿಖೆಯಿಂದ ಬೆಳಕಿಗೆ ಬಂದಿದೆ. ಚಿರಾಯು ಆಸ್ಪತ್ರೆಯ ವ್ಯವಸ್ಥಾಪಕ ಮಲ್ಲೇಶಪ್ಪ ಮುಪ್ಪಣ್ಣ ಮಾಸಣಗಿ ಅವರು ಈ ಬಗ್ಗೆ ಲೋಕಾಯುಕ್ತ ಇಲಾಖೆಗೆ ದೂರು ನೀಡಿದ ನಂತರ, ಡಿವೈಎಸ್‌ಪಿ ಮಧುಸೂದನ್ ನೇತೃತ್ವದ ತಂಡವು ವಿಶೇಷ ಕಾರ್ಯಾಚರಣೆ ನಡೆಸಿದೆ.

ಈ ಕಾರ್ಯಾಚರಣೆಯ ವೇಳೆ, ಡಾ.ಗುರುರಾಜ ಬಿರಾದಾರ ಮತ್ತು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಲಕಮಾಪುರದ ಚನ್ನಬಸಯ್ಯ ಕುಲಕರ್ಣಿ ಇವರಿಬ್ಬರನ್ನು ₹3 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸಮಯದಲ್ಲಿ ಬಂಧಿಸಲಾಯಿತು. ಇಬ್ಬರೂ ನ್ಯಾಯಾಂಗ ಬಂಧನಕ್ಕೆ ಒಳಗಾದರು. ಇದೀಗ ಷರತ್ತುಬದ್ಧ ಜಾಮೀನು ದೊರೆತಿದೆ. ನ್ಯಾಯಾಲಯವು, ಸಾಕ್ಷಿದಾರರ ಮೇಲೆ ಯಾವುದೇ ಪ್ರಭಾವ ಬೀರುವಂತಿಲ್ಲ ಎಂಬ ಷರತ್ತು ವಿಧಿಸಿದೆ.

ಲಂಚದ ಬೇಡಿಕೆ ಹೊಂದಿದ ಸನ್ನಿವೇಶದ ಪುರಾವೆಗಳನ್ನು ಕೂಡಾ ಲೋಕಾಯುಕ್ತ ಪೊಲೀಸರು ಸಂಗ್ರಹಿಸಿದ್ದಾರೆ. ಇವರ ಮನೆಗಳಲ್ಲಿ ಹುಡುಕಾಟ ನಡೆಸಿ ಕೆಲ ಮಹತ್ವದ ದಾಖಲೆಗಳೂ ಕೂಡಾ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದೆ ಮತ್ತಷ್ಟು ತನಿಖೆಯು ನಡೆಯುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author