ಬೆಂಗಳೂರು : ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಗೆ ತಂದಿದೆ. ಇದರ ವ್ಯಾಪ್ತಿಯಲ್ಲಿ ಬರುವ ನೂತನ ಪಾಲಿಕೆಗಳಿಗೆ ನಾಮಕರಣದ ಚಿಂತನೆ ನಡೆದಿದೆ. ಬೆಂಗಳೂರು ಒಡೆದು ಆಳ್ಷಿಕೆ ನಡೆಸಲಾಗುತ್ತಿದೆ ಎಂಬ ವಿರೋಧ ಪಕ್ಷಗಳಿಗೆ ರಾಜ್ಯ ಸರ್ಕಾರ ಕೌಂಟರ್ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಸರನ್ನು ಯಥಾಪ್ರಕಾರ ಮುಂದುವರೆಸುವ ಲಕ್ಷಣಗಳು ಕಂಡು ಬರುತ್ತಿವೆ.
ಜಿಬಿಎ ಅಡಿಯಲ್ಲಿ ಬರುವ ನೂತನ ಐದು ಪಾಲಿಕೆಗಳ ಹೆಸರಿನ ಮುಂದೆ ಬೆಂಗಳೂರಿನ ಹೆಸರನ್ನು ಬಳಸಲು ಮುಂದಾಗಿರುವಂತೆ ಕಾಣುತ್ತಿದೆ. ಅದರಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಹಾಗೂ ಬೆಂಗಳೂರು ಕೇಂದ್ರ ಮಹಾನಗರಪಾಲಿಕೆ ಎಂದು ನಾಮಕರಣ ಮಾಡುವ ಸಾಧ್ಯತೆಯಿದೆ.
ಮುಂಬರುವ ಆಗಸ್ಟ್ ತಿಂಗಳ 15ರ ಸ್ವಾತಂತ್ರ್ಯ ದಿನಕ್ಕೆ ಬೆಂಗಳೂರಿನ ಜನರಿಗೆ ಉಡುಗೊರೆಯಾಗಿ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪ್ರಮುಖವಾಗಿ ನೂತನ ಪಾಲಿಕೆ ರಚನೆಯ ಬಳಿಕ, ಕೆಲವೊಂದು ವಿಧಾನಸಭಾ ಕ್ಷೇತ್ರಗಳು ನೂತನ ಪಾಲಿಕೆಯ ತೆಕ್ಕೆಗೆ ಬರಲಿವೆ. ಅಲ್ಲದೆ ಹೊಸ ಪಾಲಿಕೆಗಳ ರಚನೆಯ ಕರಡು ಸಿದ್ದಗೊಳ್ಳಲು ಒಂದು ತಿಂಗಳ ಅವಧಿಯು ಬೇಕಾಗಲಿದೆ. ಈ ಸಮಯಾವಕಾಶದ ನಡುವೆಯೇ ಬೆಂಗಳೂರು ಮಹಾನಗರಕ್ಕೆ ಹೆಚ್ಚಿನ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ಪ್ರಮುಖವಾದ ಯೋಜನೆಗಳನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಇದಕ್ಕಾಗಿ ಪ್ರಾಥಮಿಕ ಹಂತದಲ್ಲಿ ಕರಡು ಪ್ರತಿಗೆ ಸಾರ್ವಜನಿಕರಿಂದ ಆಕ್ಷೇಪಣೆ ಅಥವಾ ಅಭಿಪ್ರಾಯವನ್ನು ಕೇಳಲಾಗುತ್ತದೆ. ಅದರಲ್ಲಿ ವ್ಯಕ್ತವಾಗುವ ಅನುಷ್ಠಾನಕ್ಕೆ ಯೋಗ್ಯವಾಗಿರುವ ಸಲಹೆಗಳನ್ನು ಪರಿಗಣಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ.
ಈ ಎಲ್ಲದಕ್ಕೂ ಮೊದಲು, ಸಮಿತಿಯ ವರದಿಗೆ ಅನುಗುಣವಾಗಿ ಐದು ಪಾಲಿಕೆಗಳನ್ನು ಅಸ್ತಿತ್ವಕ್ಕೆ ತರಲು ಸಚಿವ ಸಂಪುಟ ಸಭೆಯ ಅನುಮತಿ ಬೇಕಾಗುತ್ತದೆ. ಅಲ್ಲದೆ ಹೊಸ ಪಾಲಿಕೆಗಳ ರಚನೆಯ ನಂತರ ಈಗಿರುವ ವಿಧಾನಸಭಾ ಕ್ಷೇತ್ರಗಳು ಇದರ ಅಡಿಯಲ್ಲಿಯೇ ಬರಲಿವೆ. ಆದರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು, ಹೀಗಾಗಿ ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಇನ್ನೂ ಯಾವ ಪಾಲಿಕೆಗೆ ಯಾವ ವಿಧಾನಸಭಾ ಕ್ಷೇತ್ರಗಳು ಎನ್ನುವುದನ್ನು ನೋಡುವುದಾದರೆ.. ಬೆಂಗಳೂರು ಉತ್ತರ ವಲಯಕ್ಕೆ ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ಯಶವಂತಪುರ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳು ಸೇರಿಕೊಳ್ಳಲಿವೆ. ಅಲ್ಲದೆ ಬೆಂಗಳೂರು ಪೂರ್ವ ಪಾಲಿಕೆಗೆ ಸರ್ವಜ್ಞ ನಗರ, ಸಿ.ವಿ.ರಾಮನ್ ನಗರ, ಕೆ.ಆರ್.ಪುರ, ಮಹದೇವಪುರಗಳು ಸೇರ್ಪಡೆಯಾಗಲಿವೆ. ಇನ್ನುಳಿದಂತೆ ಬೆಂಗಳೂರು ಕೇಂದ್ರಕ್ಕೆ, ಗಾಂಧಿನಗರ, ಶಿವಾಜಿನಗರ, ಪುಲಿಕೇಶಿ ನಗರ, ಹೆಬ್ಬಾಳ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ರಾಜಾಜಿನಗರಗಳು ಸೇರಿಕೊಳ್ಳಲಿವೆ.
ಅಲ್ಲದೆ ಬೆಂಗಳೂರು ದಕ್ಷಿಣ ಪಾಲಿಕೆಯ ವ್ಯಾಪ್ತಿಗೆ, ಜಯನಗರ, ಚಿಕ್ಕಪೇಟೆ, ಶಾಂತಿನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ ಹಾಗೂ ಬೆಂಗಳೂರು ದಕ್ಷಿಣಕ್ಕೆ ಆನೇಕಲ್ , ಬೆಂಗಳೂರು ಪಶ್ಚಿಮಕ್ಕೆ ಗೋವಿಂದರಾಜ ನಗರ, ವಿಜಯನಗರ, ಚಾಮರಾಜಪೇಟೆ, ಬಸವನಗುಡಿ, ಪದ್ಮನಾಭ ನಗರ ಈ ಎಲ್ಲ ವಿಧಾನಸಭಾಗಳು ಸೇರ್ಪಡೆಯಾಗಲಿವೆ.