ಬೆಂಗಳೂರು: ನಗರದ ಖನಿಜಭವನದಲ್ಲಿರುವಂತ ಕೆಐಎಡಿಬಿ ಕಚೇರಿಗೆ ದೇವನಹಳ್ಳಿ ತಾಲೂಕಿನ ಸುಮಾರು 500ಕ್ಕೂ ಹೆಚ್ಚು ರೈತರು ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು. ಅಲ್ಲದೇ ಕೈಗಾರಿಕೆಗಳಿಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರೋದಕ್ಕಾಗಿ, ಸ್ಥಳೀಯವಾಗಿ ಸ್ಥಾಪನೆಯಾಗಲಿರುವ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ನೀಡುವಂತೆ ಒತ್ತಾಯಿಸಿದರು.
ಇಂದು ದೇವನಹಳ್ಳಿ ತಾಲ್ಲೂಕಿನ ಸುಮಾರು 500ಕ್ಕೂ ಹೆಚ್ಚು ರೈತರು ಖನಿಜ ಭವನದ ಕೆಐಎಡಿಬಿ ಕಚೇರಿಗೆ ಮುತ್ತಿಗೆ ಹಾಕಿದರು. ಎಕರೆಗೆ 3-4 ಕೋಟಿ ಪರಿಹಾರ ಒದಗಿಸಬೇಕು. ಮೂರು ತಿಂಗಳೊಳಗೆ ಭೂಸ್ವಾಧೀನಪಡಿಸಿಕೊಂಡು ಉದ್ಯೋಗವಕಾಶ ನೀಡಬೇಕು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯನ್ನ ಭೇಟಿ ಮಾಡಿ ರೈತರು ಒತ್ತಾಯಿಸಿದರು.
ಮುಟ್ಬಾರ್ಲೆ, ಪಾಲನಹಳಿ, ಎಡಿಯಾಳ, ಚನ್ನರಾಯಪಟ್ಟಣ, ಮುದ್ದೇನಹಳ್ಳಿ, ಸಿಮಾಸನಹಳ್ಳಿ, ಅರಳೂರು, ನಾಯಕನಹಳ್ಳಿ ಸೇರಿದಂತೆ 13 ಹಳ್ಳಿಗಳಿಂದ ರೈತರ ಆಗಮಿದ್ದರು. ನೂರಾರು ಸಂಖ್ಯೆಯಲ್ಲಿ ಖಾಸಗಿ ಬಸ್ಸುಗಳ ಮೂಲಕ ಜಮಾಯಿಸಿದ್ದ ರೈತರು, ಪ್ರತಿಭಟನೆ ನಡೆಸಿದರು.
ರೈತರ ಮನವಿ ಸ್ವೀಕರಿಸಿ ಮಾತನಾಡಿದ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ, ಶೀಘ್ರದಲ್ಲಿ ಪರಿಹಾರ ಕೊಡಲಾಗುವುದು. ರಾಜ್ಯದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಹೆಚ್ಚು ಮಹತ್ವವಿದೆ. ಉದ್ಯೋಗವಕಾಶ ಮಾಡಬೇಕೆಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದ ನೂರಾರು ಎಕರೆಯನ್ನು ರೈತರಿಂದ ಸೂಕ್ತ ಬೆಲೆಗೆ ಕೊಂಡುಕೊಳ್ಳಲಾಗುತ್ತಿದೆ ಎಂದರು.
ಬೆಂಗಳೂರೇತರ ಪ್ರದೇಶಗಳಲ್ಲಿ ಕೈಗಾರಿಕಾಭಿವೃದ್ಧಿ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಯಾವ ಭೂಮಾಲೀಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ದೇವನಹಳ್ಳಿ ಸುತ್ತಮುತ್ತಲಿನ 13 ಹಳ್ಳಿಗಳ ರೈತರು ಸೂಕ್ತ ಬೆಲೆಗಾಗಿ ಮತ್ತು ತಮ್ಮ ಮಕ್ಕಳ ಉದ್ಯೋಗಕ್ಕಾಗಿ ಮನವಿ ಮಾಡಿದ್ದಾರೆ. ಈ ಮನವಿ ನ್ಯಾಯ ಸಮ್ಮತವಾಗಿದೆ ಎಂದು ತಿಳಿಸಿದರು.
ಸದ್ಯ ಅವರ ಜಮೀನನ್ನು ಮಾರಾಟ ಮಾಡಲೂ ಆಗದೆ, ಅಭಿವೃದ್ಧಿ ಕಾರ್ಯಗಳಿಗೆ ಸಾಲವನ್ನೂ ತೆಗೆದುಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಕೊಡುತ್ತೇವೆ. ಕೂಡಲೇ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಬೆಲೆ ನೀಡಲು ಕ್ರಮ ಕೈಗೊಳ್ಳುತ್ತೇನೆ. ಮೊದಲೇ ಗೊತ್ತಿದ್ದರೆ ನಾನೇ ಅವರ ಊರುಗಳ ಬಳಿ ಹೋಗಿ ಸಮಸ್ಯೆಗಳನ್ನು ಆಲಿಸುತ್ತಿದ್ದೆ. ಇಲ್ಲಿಯವರೆಗೂ ಅವರು ಬರುವ ಅಗತ್ಯವಿರಲಿಲ್ಲ. ಕಾಲಾವಕಾಶ ಕೊಟ್ಟರೆ ಸಮಸ್ಯೆ ಬಗೆಹರಿಸುತ್ತೇವೆ. ಅಲ್ಲಿನ ಕೆಲ ರೈತರು ಜಮೀನನ್ನು ಕೊಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಅವರ ಬಳಿಯೂ ಮಾತನಾಡುತ್ತೇವೆ ಎಂದರು.
ರೈತರ ಪರವಾಗಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಭಾರತ್ ಕಿಸಾನ್ ಸಂಘ ಅಧ್ಯಕ್ಷ ನಾಗರಾಜಯ್ಯ, ಸರ್ಕಾರ ಈಗಾಗಲೇ ಸಾವಿರಕ್ಕೂ ಹೆಚ್ಚು ಎಕರೆಗಳನ್ನು ಖರೀದಿಸಿದೆ. ಸುತ್ತಮುತ್ತಲು ಊರುಗಳ ಜಮೀನುಗಳನ್ನು ಕೈಗಾರಿಕಾ ಅಭಿವೃದ್ಧಿಗೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿತ್ತು. ವರ್ಷಗಳಾದರೂ ಆ ಕಾರ್ಯ ಇನ್ನೂ ಆಗಿಲ್ಲ. ರೈತರು ಖಾಸಗಿಯವರಿಗೆ ಮಾರಲಾಗದೆ, ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗದೆ ಪರದಾಡುತ್ತಿದ್ದಾರೆ. ಸರ್ಕಾರ ಖರೀದಿ ಮಾಡುತ್ತಾ ಅಥವಾ ಇಲ್ಲವಾ ಎಂಬುದನ್ನು ಹೇಳಬೇಕು. ಜಮೀನು ಕೊಡಲು ತಕರಾರಿಲ್ಲ ಅದಕ್ಕೆ ಸೂಕ್ತ ಬೆಲೆ ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಖರೀದಿಸುವುದಿಲ್ಲ ಎಂದರೆ ರೈತರ ಇಚ್ಛೆಯಂತೆ ವ್ಯವಸಾಯ ಇಲ್ಲ ಬೇರೆ ಅಭಿವೃದ್ಧಿಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ಹನುಮಪ್ಪ, ಮುನಿಶಾಮಪ್ಪ, ವೆಂಕಟಪ್ಪ, ಹುಚ್ಚಪ್ಪ, ವೆಂಕಟಸ್ವಾಮಿ ಮತ್ತಿತರ ನೂರಾರು ರೈತರಿಂದ ಆರೋಪ ಮಾಡಲಾಯಿತು.




