ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ, 2ನೇ ಕ್ವಾರ್ಟರ್ನಲ್ಲಿ ಜಿಡಿಪಿ,ಅಂದ್ರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ ಶೇ. 8.2ರಷ್ಟು ಬೆಳೆದಿದೆ. ಈ ವರ್ಷದ ಮೊದಲ ಕ್ವಾರ್ಟರ್ನಲ್ಲಿ ಶೇ. 7.8ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದ ಭಾರತ, ಜುಲೈನಿಂದ ಸೆಪ್ಟೆಂಬರ್ವರೆಗಿನ ತ್ರೈಮಾಸಿಕದಲ್ಲಿ ಇನ್ನಷ್ಟು ಅಚ್ಚರಿ ತಂದಿದೆ. ಹೆಚ್ಚಿನ ಆರ್ಥಿಕ ತಜ್ಞರು ಶೇ. 7ರಿಂದ ಶೇ. 7.5ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದ್ದರೂ, ಈ ಬಾರಿ ನಿರೀಕ್ಷೆ ಮೀರಿ ಅಭಿವೃದ್ಧಿ ಕಂಡುಬಂತು.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದ ಪ್ರಕಾರ, ಈ ತ್ರೈಮಾಸಿಕದಲ್ಲಿ ಭಾರತದ ರಿಯಲ್ ಜಿಡಿಪಿ 48.63 ಲಕ್ಷ ಕೋಟಿ ರೂಗೆ ಏರಿದೆ. ಹಿಂದಿನ ವರ್ಷದ ಇದೇ ಕಾಲದಲ್ಲಿ ಇದು 44.94 ಲಕ್ಷ ಕೋಟಿ ರೂ ಇತ್ತು. ಈ ಹಿನ್ನಲೆಯಲ್ಲಿ, ಭಾರತದ ಆರ್ಥಿಕತೆ ಶೇ. 8.2ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ತಿಳಿದುಬರುತ್ತದೆ.
ಮ್ಯಾನುಫ್ಯಾಕ್ಚರಿಂಗ್ ವಲಯ ಶೇ. 9.1ರಷ್ಟು ಬೆಳವಣಿಗೆ ಕಂಡು, ಜಿಡಿಪಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಯಿತು. ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳ ಉತ್ಪಾದನೆ ಶೇ. 10.2ರಷ್ಟು ಹೆಚ್ಚಾಗಿದ್ದು, ಕೃಷಿ ವಲಯ ಶೇ. 3.5ರಷ್ಟೇ ಸಾಧಾರಣ ಬೆಳವಣಿಗೆ ಕಂಡಿದೆ. ವಿದ್ಯುತ್, ಗ್ಯಾಸ್, ನೀರು ಸರಬರಾಜು ಮತ್ತು ನಾಗರಿಕ ಸೇವೆಗಳ ಸೆಕ್ಟರ್ ಶೇ. 4.4ರಷ್ಟೇ ಬೆಳವಣಿಗೆ ಕಂಡಿದೆ.
ಕೇಂದ್ರ ಸರ್ಕಾರವು 2047ರೊಳಗೆ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡಬೇಕೆಂಬ ಸಂಕಲ್ಪವಿಟ್ಟಿದೆ. ಈ ಗುರಿಯನ್ನು ಸಾಧಿಸಲು ಮುಂದಿನ 22 ವರ್ಷಗಳಲ್ಲಿ ದೇಶದ ಆರ್ಥಿಕತೆಯು ಶೇ. 7.8ರ ಸರಾಸರಿ ದರದಲ್ಲಿ ಬೆಳೆಯಬೇಕು. ಎರಡು ದಶಕಗಳ ಕಾಲ ಶೇ. 8ರಷ್ಟು ಸರಾಸರಿ ವೇಗದಲ್ಲಿ ಬೆಳವಣಿಗೆ ಸಾಗಿದ್ದರೆ 2047ಕ್ಕೆ ಭಾರತ ವಿಕಸಿತ ರಾಷ್ಟ್ರವಾಗಲು ಸಾಧ್ಯ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ ….
ವರದಿ : ಗಾಯತ್ರಿ ಗುಬ್ಬಿ

