ಪೊಲೀಸರ ಮುಂದೆ ಧನ್ವೀರ್ ಹೇಳಿಕೆ – ನನ್ನದು ತಪ್ಪಾಗಿದೆ.. ಕ್ಷಮಿಸಿ ಎಂದಿದ್ದೇಕೆ?

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ನಿಜ ಎಂದು ಆರ್.ಆರ್. ನಗರ ಪೊಲೀಸರ ವಿಚಾರಣೆ ವೇಳೆ ನಟ ಧನ್ವೀರ್ ಒಪ್ಪಿಕೊಂಡಿದ್ದಾರೆ. ಹೈಕೋರ್ಟ್ ಸೂಚನೆಯ ಮೇರೆಗೆ ವಿಚಾರಣೆಗೆ ಹಾಜರಾದ ಧನ್ವೀರ್, ಆರ್.ಆರ್. ನಗರ ಠಾಣೆ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಅವರ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ವಿಚಾರಣೆ ವೇಳೆ ಮಾತನಾಡಿರುವ ಧನ್ವೀರ್, ‘ನಾನು ಕರೆ ಮಾಡಿ ನಾಗರಾಜ್‌ಗೆ ಬೈದಿದ್ದು ನಿಜ, ನನ್ನದು ತಪ್ಪಾಗಿದೆ, ಕ್ಷಮೆಯಿರಲಿ’ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಕಾರಣವನ್ನೂ ವಿವರಿಸಿರುವ ಅವರು, ವಿಜಯಲಕ್ಷ್ಮಿ ಹಾಗೂ ನಾಗರಾಜ್ ತಮ್ಮ ಮನೆಗೆ ಬಂದು ಗಲಾಟೆ ಮಾಡಿ, ತಮ್ಮ ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಆ ಕೋಪದಲ್ಲಿ ತಾವು ನಾಗರಾಜ್‌ಗೆ ಬೈದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಹಣಕಾಸಿನ ವಿಚಾರಕ್ಕೆ ಈ ಗಲಾಟೆ ನಡೆದಿದ್ದು, ತಾವು ಲೆಕ್ಕ ಕೊಡಲು ಸಿದ್ಧವಿದ್ದರೂ ಅವರೇ ಬರುತ್ತಿಲ್ಲ ಎಂದು ಧನ್ವೀರ್ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಅವರ ಬಗ್ಗೆ ತಾವು ಮಾತನಾಡಿಲ್ಲ ಎಂದು ಧನ್ವೀರ್ ಸ್ಪಷ್ಟಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆ ವಿಡಿಯೋ ಎಐ ಕ್ರಿಯೇಟೆಡ್ ಆಗಿದ್ದು, ತಮಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ರೀತಿ ಆಡಿಯೋ ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ..

ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ರದ್ದು ಕೋರಿ ಧನ್ವೀರ್ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ನ್ಯಾಯಾಲಯದ ಸೂಚನೆಯಂತೆ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಸದ್ಯ ಆರ್.ಆರ್. ನಗರ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

About The Author