ಧರ್ಮಸ್ಥಳ ಪ್ರಕರಣದಲ್ಲಿ ಯಾರ ಪಾತ್ರ ಸುಳ್ಳು, ಯಾರ ಪಾತ್ರ ಸತ್ಯ ಎಂಬ ರೋಚಕ ಪ್ರಶ್ನೆಗೆ ಉತ್ತರ ಸಿಗುವ ದಿನ ಹತ್ತಿರವಾಗುತ್ತಿದೆ. ಏಕೆಂದರೆ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಸ್ಫೋಟಕ ದೂರಿನಿಂದ ಪ್ರಾರಂಭವಾದ ಈ ಪ್ರಕರಣ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ದೇಶದಾದ್ಯಂತ ಸಂಚಲನ ಮೂಡಿಸಿದ ಈ ಪ್ರಕರಣದಲ್ಲಿ ಆರೋಪಿಗಳಾದ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಮತ್ತು ವಿಠಲಗೌಡ ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಸಂಖ್ಯೆ 39/2025 ಅನ್ನು ರದ್ದುಪಡಿಸಲು ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣದ ಭವಿಷ್ಯ ಈಗ ಕೋರ್ಟ್ ತೀರ್ಪಿನ ಮೇಲೆ ನಿಂತಿದೆ. ಇತ್ತ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಆರೋಪಿಗಳ ಮನೆ ಬಾಗಿಲಿಗೇ ತೆರಳಿ ನೋಟಿಸ್ ಜಾರಿ ಮಾಡಿದ್ದಾರೆ. ಅಕ್ಟೋಬರ್ 30ರಂದು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಮತ್ತು ಜಯಂತ್ ಟಿ. ಅವರಿಗೆ ನವೆಂಬರ್ 3ರಂದು ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಇದೇ ವೇಳೆ ವಿಠಲಗೌಡ ಅವರಿಗೆ ಅಕ್ಟೋಬರ್ 31ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಒಟ್ಟಿನಲ್ಲಿ, ಧರ್ಮಸ್ಥಳದ ಈ ಗಂಭೀರ ಪ್ರಕರಣ ಇದೀಗ ಹೈಕೋರ್ಟ್ ಮತ್ತು ಎಸ್‌ಐಟಿ ನಡುವೆ ತೀವ್ರ ಹಂತ ತಲುಪಿದ್ದು — ಎಫ್‌ಐಆರ್ ಉಳಿಯುತ್ತದಾ ಅಥವಾ ರದ್ದು ಆಗುತ್ತದಾ ಎನ್ನುವುದು ರಾಜ್ಯದಾದ್ಯಂತ ಕಣ್ಣಿಟ್ಟಿರುವ ಪ್ರಮುಖ ಪ್ರಶ್ನೆಯಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

