ಮಂಗಳೂರು : ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಚತುರ್ವಿಧದಾನ ಪರಂಪರೆಯಿಂದ ಈ ದೇವಸ್ಥಾನ ಹೆಸರುವಾಸಿಯಾಗಿದೆ. ಮರಕ್ಕೆ ಬೇರಿದ್ದ ಹಾಗೆ, ಮನುಷ್ಯನಿಗೆ ನಂಬಿಕೆ. ನಂಬಿಕೆಯಿಂದ, ಮೋಕ್ಷ ಸಾಧನೆಗಾಗಿ ಜನರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಧರ್ಮ ನೂರಾದರೂ ತತ್ವವೊಂದೇ, ನಾಮ ಹಲವಾದರೂ ದೈವವೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಪಾದಿಸಿದ್ದಾರೆ.
ಧರ್ಮಸ್ಥಳದಲ್ಲಿ ಕಲ್ಯಾಣ ಮಂಟಪದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ದೇಶಕ್ಕೆ ಧರ್ಮಸ್ಥಳ ಸಾಕಷ್ಟು ಧಾರ್ಮಿಕ ಕೊಡುಗೆಗಳನ್ನು ನೀಡುತ್ತಾ ಬರುತ್ತಿದೆ. ನಮ್ಮ ಕೆಲಸಗಳಿಗೆ ಬಂದ ಟೀಕೆಗಳು ಸಾಯುತ್ತವೆ, ಆದರೆ ನಾವು ಮಾಡಿದ ಕೆಲಸಗಳು ಅಚ್ಚಳಿಯದೆ ಉಳಿಯುತ್ತವೆ. ಹಾಗಾಗಿ ನೀವು ಯಾವುದಕ್ಕೂ ಅಂಜುವ ಸಂಧರ್ಭನೇ ಇಲ್ಲ, ಹಾಗೆಯೇ ಧರ್ಮಸ್ಥಳದಲ್ಲಿ ಧರ್ಮವನ್ನು ಕಾಪಾಡಿಕೊಳ್ಳುತ್ತ ಬಂದಿರುವ ಧರ್ಮಾಧಿಕಾರಿಗಳ ಪರಿಶುದ್ಧವಾದ ಸೇವೆಗೆ ನನ್ನಂಥ ಸಾವಿರಾರು ಡಿಕೆ ಶಿವಕುಮಾರ್‌ಗಳ ಬೆಂಬಲವಿದೆ ಎನ್ನುವ ಮೂಲಕ ಧರ್ಮಸ್ಥಳಕ್ಕೆ ಬೆನ್ನೆಲುಬಾಗಿ ನಿಲ್ಲುವ ಪ್ರತಿಜ್ಞೆಯನ್ನು ಅವರು ಮಾಡಿದ್ದಾರೆ.
ವೀರೇಂದ್ರ ಹೆಗ್ಗಡೆಯವರ ಕಾರ್ಯ ರಾಷ್ಟ್ರಕ್ಕೆ ಮಾದರಿ..
ಇನ್ನೂ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆಯವರನ್ನು ಹಾಡಿಹೊಗಳಿರುವ ಅವರು, ಹೆಗ್ಗಡೆಯವರು ಅತಿ ಕಿರಿಯ ವಯಸ್ಸಿನಲ್ಲಿಯೇ ಧರ್ಮದ ರಕ್ಷಣೆ ಜೊತೆಗೆ ಶೈಕ್ಷಣಿಕವಾಗಿ, ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ ಬಹುಮಖಿ ಸೇವೆಯನ್ನು ನೀಡುತ್ತಿದ್ದಾರೆ. ಅಲ್ಲದೆ ಧರ್ಮಾಧಿಕಾರಿಯಾಗಿ ಡಾ. ವೀರೇಂದ್ರ ಹೆಗ್ಗಡೆಯವರು ಆರೋಗ್ಯ ಕ್ಷೇತ್ರದಲ್ಲೂ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ಹೀಗೆಯೇ ಅವರ ಪವಿತ್ರ ಸೇವಾ ಕಲ್ಯಾಣ ಮುಂದುವರೆಯಲಿ. ಅಲ್ಲದೆ ಈ ಧರ್ಮಸ್ಥಳದಲ್ಲಿ ಕಲ್ಯಾಣ ಮಂಟಪದ ಉದ್ಘಾಟನೆಯ ಭಾಗ್ಯ ನನಗೆ ದೊತಿದ್ದು ಸಂತಸ ನೀಡಿದೆ ಎಂದು ಡಿಕೆ ಶಿವಕುಮಾರ್ ಧನ್ಯತಾಭಾವ ಮೆರೆದಿದ್ದಾರೆ.
ನನ್ನ ಯಶಸ್ಸಿನಲ್ಲಿ ಈ ಶಿವನ ಕ್ಷೇತ್ರದ ಪಾಲು ದೊಡ್ಡದಿದೆ…
ಅಲ್ಲದೆ ನಾನು ರಾಜಕೀಯದಲ್ಲಿ ಹಲವು ಹುದ್ದೆಗೆ ಏರಿದರೂ ಇಲ್ಲಿಗೆ ಮಂಜುನಾಥನ ಭಕ್ತನಾಗಿಯೇ ಬರುತ್ತಿರುವೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಇಲ್ಲಿ ಯಾವುದೂ ಶಾಶ್ವತ ಅಲ್ಲ. ರಾಜ ಆದವನೂ ಅಧಿಕಾರ ಕಳೆದುಕೊಳ್ತಾನೆ, ರಾಜಕಾರಣಿ ಆದವನೂ ಸಹ ಅಧಿಕಾರ ಕಳೆದುಕೊಳ್ತಾನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಇನ್ನೂ ಡಾ. ವೀರೇಂದ್ರ ಹೆಗ್ಗಡೆಯವರು ನಡೆದು ಬಂದ ದಾರಿ ಮತ್ತು ರಾಜ್ಯಕ್ಕೆ ಕೊಟ್ಟ ಮಾರ್ಗದರ್ಶನ ದೊಡ್ಡದು. ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಹೆಗ್ಗಡೆಯವರು ಮಾಡಿದ ಸಾಧನೆ ಧರ್ಮ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ದಾಖಲಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ನನ್ನ ತಮ್ಮ ಪ್ರತೀ ವರ್ಷ ಧರ್ಮಸ್ಥಳದಲ್ಲೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾನೆ. ನಾನು ಮತ್ತು ನನ್ನ ಕುಟುಂಬ ಕೂಡ ಇಲ್ಲಿಗೆ ಬರುತ್ತಿರುತ್ತೇವೆ. ನನ್ನ ಯಶಸ್ಸಿನಲ್ಲಿ ಈ ಶಿವನ ಕ್ಷೇತ್ರದ ಪಾಲು ದೊಡ್ಡದಿದೆ. ಮಂಜುನಾಥನ ನಂಬಿದ ಯಾರಿಗೂ ತೊಂದರೆ ಆಗಿಲ್ಲ ಡಿಸಿಎಂ ಭಕ್ತಿ ಭಾವದ ಮಾತುಗಳನ್ನಾಡಿದ್ದಾರೆ.
ಟೀಕೆ ಮಾಡೋರು ಬೇಕಾದಷ್ಟು ಜನರಿದ್ದಾರೆ..
ಕೆಲವರು ಧರ್ಮಸ್ಥಳದ ವಿಚಾರದಲ್ಲಿ ವಾದ ಮತ್ತು ಟೀಕೆಗಳನ್ನು ಮಾಡುತ್ತಾರೆ. ಶ್ರೀಗಳು ಜೈನರು, ಅವರು ಹೇಗೆ ಮಂಜುನಾಥನ ನಂಬುತ್ತಾರೆ ಅಂತ ಕೇಳುತ್ತಾರೆ. ಹೀಗೆ ವಾದ ಮಾಡಿದವರಲ್ಲಿ ಕೆಲ ನಾಯಕರು, ಸಮಾಜ ಸೇವಕರು, ಚಿಂತಕರೆಲ್ಲ ಇದ್ದಾರೆ. ಧರ್ಮ ಯಾವುದಾದರೂ ತತ್ವ ಒಂದೆ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಇಂತಹ ಪವಿತ್ರವಾದ ಕ್ಷೇತ್ರವನ್ನ ಉಳಿಸಿಕೊಂಡು ಬೆಳೆಸಿ ಕೊಂಡು ಹೋಗಬೇಕಿದೆ. ಸಣ್ಣಪುಟ್ಟ ಮಾತನಾಡೋರು ಹಾಗೂ ಟೀಕೆ ಮಾಡೋರು ಬೇಕಾದಷ್ಟು ಜನ ಇರುತ್ತಾರೆ ಎನ್ನುವ ಮೂಲಕ ಡಿಕೆ ಶಿವಕುಮಾರ್ ಟೀಕಾಕಾರರಿಗೆ ಖಡಕ್ ಕೌಂಟರ್ ನೀಡಿದ್ದಾರೆ.