Tuesday, September 16, 2025

Latest Posts

ಜನಸಾಗರದಲ್ಲಿ ಮುಳುಗಿದ ಧಾರವಾಡ ಕೃಷಿ ಮೇಳ!

- Advertisement -

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ನಡೆಯುತ್ತಿದೆ. ಈ ಕೃಷಿ ಮೇಳ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ಭಾರೀ ಉತ್ಸಾಹ ತೋರಿದರು. ಮೇಳದ ಎಲ್ಲಾ ಭಾಗಗಳನ್ನು ನೋಡುವೆಂದರೆ ಒಂದೇ ದಿನ ಸಾಲದು ಎಂಬ ಮಾತುಗಳು ಭಾಗವಹಿಸಿದವರ ಮಾತುಗಳು ಕೇಳಿಬರ್ತಾಯಿದೆ.

ಪ್ರಸಕ್ತ ವರ್ಷ ‘ಪೌಷ್ಠಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು’ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿರುವ ಕೃಷಿ ಮೇಳಕ್ಕೆ ಮೂರನೇ ದಿನವೂ ಜನಸಾಗರವೇ ಹರಿದು ಬಂದಿತ್ತು. ಮೊದಲ ದಿನವಾದ ಶನಿವಾರ ಸುಮಾರು ಮೂರೂವರೆ ಲಕ್ಷ ಜನ, ಎರಡನೇ ದಿನ ಏಳು ಲಕ್ಷಕ್ಕೂ ಅಧಿಕ ಜನ, ಮೂರನೇ ದಿನ ಸುಮಾರು ಏಳೂವರೆ ಲಕ್ಷಕ್ಕೂ ಅಧಿಕ ಜನ ಕೃಷಿ ಮೇಳಕ್ಕೆ ಆಗಮಿಸಿದ್ದರು.

ಮೇಳಕ್ಕೆ ಆಗಮಿಸಲು ಹಾಗೂ ನಿರ್ಗಮಿಸಲು ನಾಲ್ಕು ಕಡೆಗಳಿಂದ ಪ್ರತ್ಯೇಕ ದ್ವಾರಗಳಿದ್ದರೂ ಸಹ ಜನಸಂದಣಿಯಿಂದ ಗೊಂದಲ ಉಂಟಾಗಿತ್ತು. ಯಾವ ದಿಕ್ಕಿಗೆ ಹೋಗಬೇಕು, ಎಷ್ಟು ದೂರ ನಡೆಯಬೇಕು ಎಂದು ತಿಳಿಯದ ಸ್ಥಿತಿ ನಿರ್ಮಾಣವಾಗಿತ್ತು. ಒಂದು ದಿನದಲ್ಲಿ ಎಲ್ಲಾ ಮಳಿಗೆಗಳನ್ನು ಸುತ್ತಿ ನೋಡಲು ಸಾಧ್ಯವಿಲ್ಲ. ಎಲ್ಲಾ ಮಳಿಗೆಯವರನ್ನು ಮಾತನಾಡಿಸಲು ಕನಿಷ್ಠ ಎರಡು ದಿನ ಬೇಕು ಎಂದು ಭಾಗವಹಿಸಿದವರು ತಮ್ಮ ಅನುಭವವನ್ನು ಹಂಚಿಕೊಂಡರು.

ಕೃಷಿ ವಿಶ್ವವಿದ್ಯಾಲಯದ ಮುಖ್ಯದ್ವಾರ ದಾಟಿದ ತಕ್ಷಣವೇ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಮಳಿಗೆಗಳು ಭೇಟಿ ನೀಡುವವರಿಗೆ ಗಮನಸೆಳೆಯುತ್ತವೆ. ಅದರ ಪಕ್ಕದಲ್ಲೇ ನೋಂದಣಿ ಕೇಂದ್ರ, ಇನ್ನೂ ಮುಂದೆ ಕೃಷಿ ಮತ್ತು ಕೃಷಿಯೇತರ ಉತ್ಪನ್ನಗಳಿವೆ. ಜೊತೆಗೆ ಫಲಪುಷ್ಪ ಪ್ರದರ್ಶನ, ಕೀಟವಿಜ್ಞಾನ, ಗೊಬ್ಬರ, ಬೀಜ, ಯಂತ್ರೋಪಕರಣಗಳ ಇತ್ಯಾದಿ ವೈವಿಧ್ಯಮಯ ಮಳಿಗೆಗಳು ಕುತೂಹಲ ಮೂಡಿಸುತ್ತವೆ.

ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಜನ ಆಗಮಿಸಿದ್ದಾರೆ. ಹಲವರು ಕೃಷಿ ಉಪಕರಣಗಳು ಮತ್ತು ಸಸಿಗಳನ್ನು ಖರೀದಿಸಿದ್ದಾರೆ. ಇನ್ನೂ ಕೆಲವರು ಜಾನುವಾರುಗಳ ಮಾಹಿತಿಗಾಗಿ ಬಂದಿದ್ದರು. ಮೇಳದ ಎಲ್ಲಾ ಭಾಗಗಳನ್ನು ನೋಡಲು ತುಂಬಾ ಸಮಯ ಬೇಕು. ಇಲ್ಲಿ ಬಂದದ್ದು ತುಂಬಾ ಸಂತೋಷ ಕೊಟ್ಟಿದೆ ಎಂದು ಭಾಗವಹಿಸಿದ ರೈತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಜನರಿಗೆ ಅನುಕೂಲವಾಗಲೆಂದು ಕೃಷಿ ಮತ್ತು ಕೃಷಿಯೇತರ ವಿಷಯಗಳಿಗೆ ಸಂಬಂಧಿಸಿದ ಮಳಿಗೆಗಳನ್ನು ಪ್ರತ್ಯೇಕವಾಗಿ ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಮೇಳದ ಹೊರವಲಯದಲ್ಲಿ ಆಹಾರ ಮಳಿಗೆಗಳು, ಖಾನಾವಳಿ ಹಾಗೂ ವಿಶ್ರಾಂತಿ ಪ್ರದೇಶಗಳು ವ್ಯವಸ್ಥಿತವಾಗಿ ಸಿದ್ಧಪಡಿಸಲಾಗಿದೆ. ಒಟ್ಟಾರೆ ರೈತರ ಜಾತ್ರೆ ಎಂದೇ ಕರೆಯಿಸಿಕೊಳ್ಳುವ ಕೃಷಿ ಮೇಳ ಮೂರನೇ ದಿನ ಯಶಸ್ವಿಯಾಗಿದ್ದು, ಮಂಗಳವಾರ ಕೊನೆಯ ದಿನದ ಕೃಷಿ ಮೇಳ ನಡೆಯಲಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss