Dharwad News: ಧಾರವಾಡ: ಶಿವಮೊಗ್ಗ, ಕಲಬುರಗಿಯಲ್ಲಿ ಯಾವ ರೀತಿ ಸಿಇಟಿ ಪರೀಕ್ಷೆಯಲ್ಲಿ ಜನಿವಾರನ್ನು ತೆಗೆಸಿ, ಕತ್ತರಿಸಿ ಅವಮಾನಿಸಲಾಗಿದೆಯೋ, ಅದೇ ರೀತಿ ಧಾರವಾಡದಲ್ಲಿಯೂ ಜನಿವಾರಕ್ಕೆ ಕತ್ತರಿ ಹಾಕಲಾಗಿದೆ.
ಧಾರವಾಡ ನಗರದ ಹುರಕಡ್ಲಿ ಕಾಲೇಜ್‌ನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ನಗರದ ಜೆಎಸ್ಎಸ್ ಕಾಲೇಜು ವಿದ್ಯಾರ್ಥಿ ನಂದನ್ ಏರಿ ಎಂಬ ವಿದ್ಯಾರ್ಥಿಯ ಜನಿವಾರ ಕಟ್ ಮಾಡಲಾಗಿದ್ದು, ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ ಜನಿವಾರ ಕತ್ತರಿಸಲಾಗಿದೆ. ಮೊದಲು ಜನಿವಾರ ಹಾಕಿಕೊಂಡು ಹೋಗದಂತೆ ತಡೆದಿದ್ದು, ಅದನ್ನು ತೆಗೆದು ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಆದರು ಕೂಡ ಅದಕ್ಕೂ ಅವಕಾಶ ಕೊಡದ ಅಧಿಕಾರಿಗಳು, ಸಮಯವಿಲ್ಲವೆಂದು ಜನಿವಾರವನ್ನು ಕತ್ತರಿಸಿದ್ದಾರೆ. ಬಳಿಕ ವಿದ್ಯಾಾರ್ಥಿಯ ಕೈಗೆ ಕತ್ತರಿಸಿದ ಜನಿವಾರ ಕೊಟ್ಟಿದ್ದಾರೆ.
ಬಳಿಕ ನಂದನ್ ಎರಡು ದಿನಗಳ ಬಳಿಕ ಹೊಸ ಜನಿವಾರ ಧಾರಣೆ ಮಾಡಿಕೊಂಡಿದ್ದಾನೆ. ಬೀದರ್, ಶಿವಮೊಗ್ಗದಲ್ಲೂ ಇಂಥ ಘಟನೆ ನಡೆದ ಬಳಿಕ, ತಂದೆಯ ಬಳಿ ಈ ವಿಷಯ ಹೇಳಿದ್ದಾನೆ. ಈ ಬಗ್ಗೆ ಆಕ್ರೋಶ ಹೊರಹಾಕಿರುವ ವಿವೇಕ್ ಏರಿ, ಮಗನಿಗೆ ಸರಿಯಾಗಿ ಪರೀಕ್ಷೆ ಬರೆಯಲು ಆಗಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿರುವ ಈ ವಿದ್ಯಾರ್ಥಿಯ ಮನೆಗೆ ಭೇಟಿ ಕೊಟ್ಟು, ವಿದ್ಯಾರ್ಥಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೇ, ಜನಿವಾರ ತೆಗೆಸಿದವರು ಯಾರು ಎಂದು ಪ್ರಶ್ನಿಸಿದ್ದು, ವಿದ್ಯಾರ್ಥಿ ಅಲ್ಲಿನ ಪೊಲೀಸ್ ಅಧಿಕಾರಿಗಳು ಅದನ್ನು ತೆಗೆಸಿದರು ಎಂದು ಹೇಳಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಬ್ರಾಹ್ಮಣ ಸಮುದಾಯದವರು, ಧಾರವಾಡ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಬಂಂದಾಗಿನಿಂದಲೂ ಹಿಂದೂಗಳ ಮೇಲೆ ಈ ರೀತಿಯ ಘಟನೆಗಳು ಆಗುತ್ತಿದೆ. ಈ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಸನಾತನ ಧರ್ಮದ ಬಗ್ಗೆ ಸಿಎಂ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.